ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿ ನೈಟ್ ಕ್ಲಬ್ ನಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಜನ ಸಾವನ್ನಪ್ಪಿದ ಘಟನೆ ಮನಸ್ಸಿಂದ ಮಾಸುವ ಮುನ್ನವೇ ಗೋವಾ ರಾಜಧಾನಿ ಪಣಜಿಯ ಕಲಾ ಅಕಾಡಮಿಯ ಬಳಿ ಆಯೋಜಿಸಲಾಗುತ್ತಿರುವ “ಸೆರೆಂಡಿಪಿಟಿ” ಅಂತರಾಷ್ಟ್ರೀಯ ಮಹೋತ್ಸವದ ಬೃಹತ್ ಟೆಂಟ್ ನಲ್ಲಿ ಸೋಮವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಠವಶಾತ್ ದೊಡ್ಡ ಅನಾಹುತ ತಪ್ಪಿದ್ದು, ಕೂಡಲೇ ಕಲಾ ಅಕಾಡಮಿಯ ಕರ್ಮಚಾರಿಗಳು ನಡೆಸಿದ ಕಾರ್ಯಚರಣೆಯಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಘಟನೆಯ ಕುರಿತು ಪೋಲಿಸರಿಂದ ಲಭ್ಯವಾದ ಮಾಹಿತಿಯ ಅನುಸಾರ- ಪಣಜಿಯ ಕಲಾ ಅಕಾಡಮಿಯ ಬಳಿ ಸೆರೆಂಡಿಪಿಟಿ ಮಹೋತ್ಸವಕ್ಕಾಗಿ ಸೆಟ್ ಸಿದ್ಧಪಡಿಸಲಾಗುತ್ತಿತ್ತು. ಅಲ್ಲಿದ್ದ ಸ್ಪಂಜಿನಂತಹ ವಸ್ತುವಿಗೆ ಬೆಂಕಿಹೊತ್ತಿ ಉರಿದಿದೆ. ಮೇಲ್ಭಾಗದಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು. ಅದರಿಂದಾಗಿ ಬಂದ ಬೆಂಕಿ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಹಾಗೂ ಪೋಲಿಸರು ಆಗಮಿಸುವ ಮುನ್ನ ಕಲಾ ಅಕಾಡಮಿಯ ಸುರಕ್ಷಾ ಕರ್ಮಚಾರಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ದೊಡ್ಡಪ್ರಮಾಣದ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಕಳೆದ ವರ್ಷ ಪಣಜಿಯ ಐನೊಕ್ಸ ನಲ್ಲಿ ಸೆಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿಯೂ ಇದೇ ರೀತಿ ಬೆಂಕಿ ಹೊತ್ತಿಕೊಂಡಿತ್ತು.

ಹೊಸ ವರ್ಷ ಸಂಭ್ರಮಾಚರಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಗೋವಾದಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರ್ಷ ಸಂಭ್ರಮಾಚರಣೆಗೆ ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಂತಹ ಘಟನೆಗಳು ಇದೀಗ ಪ್ರವಾಸಿಗರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.