ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ) ಗೋವಾದ ಕಾಣಕೋಣದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠದ 550 ನೇಯ ವರ್ಧಂತಿ ಉತ್ಸವದ ಆರನೇ ದಿನದ ಮಧ್ಯಾಹ್ನ ಎರಡೂ ನಲವತ್ತೈದರ ಸಮಯ ಅದು. ಹೋಮ ಹವನ ನಡೆವ ಮಂಟಪದಲ್ಲಿ ಎಂದಿನಂತೆ ಅಂದಿನ ಪೂರ್ಣಾಹುತಿ ಪೂಜೆ ಸೇವಾದಾರರ ಪ್ರಸಾದ ವಿತರಣೆ ಮುಗಿಸಿ ಶ್ರೀಮಠದ ಪೀಠಾಧಿಪತಿಗಳಾದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ತಮ್ಮ ಗುರುಭವನಕ್ಕೆ ಹಿಂತಿರುಗುವಾಗ ಹಾದಿಯ ಪಕ್ಕ ವೀಲ್ ಚೆಯರ್ ನಲ್ಲಿ ಕುಳಿತು ಗುರುದರ್ಶನದ ಆಸೆಯಲ್ಲಿದ್ದ ಅನಾರೋಗ್ಯ ನಿಶ್ಚಕ್ತ ವಯೋವೃದ್ಧ ವ್ಯಕ್ತಿಯನ್ನು ಕಂಡ ಗುರುಗಳು ಆತನನ್ನು ಸಂತೈಸಿ ಹರಸಿದ ಪರಿ ಹೀಗಿತ್ತು.
ಮಠ ಮಂದಿರಗಳ ಮೂಲ ಆಶಯವೇ ಸರ್ವರ ಒಳಿತು ಲೋಕದ ಶ್ರೇಯೋಭಿವೃದ್ಧಿ ಹಾಗೂ ಜನ ಮನದ ಆರೋಗ್ಯತಾನೆ? ಏನೋ ಸಮಾಧಾನ ಸಂತೃಪ್ತಿ ಭರವಸೆಯ ಆಸೆ ಹೊತ್ತು ನಂಬಿಕೆಯಿಂದ ಸೇರುವ ಭಕ್ತರಿಗೆ ದೇವರ ದರ್ಶನ ಗುರುಗಳ ಆಶೀರ್ವಾದವೇ ಪ್ರಧಾನ. ಇದರ ಜತೆಜತೆ ಅಲ್ಲಿನ ವ್ಯವಸ್ಥೆ, ಊಟ ಉಪಚಾರದ ಸಮಯ ಪಾಲನೆ ಅರ್ಚಕರ ಮಾತು ಪ್ರೀತ್ಯಾದಾರ ಇವೂ ಈಗ ಅಗತ್ಯ. ಇವೆಲ್ಲದರ ಜತೆ ಗುರುಗಳಲ್ಲಿ ಸರ್ವ ಜನರನ್ನು ಪ್ರೀತಿಸುವ ಮಾನವ ಅಂತಃಕರಣ ಇದೆ ಅನ್ನೋದೆ ನಮ್ಮ ಸಂಪತ್ತು.
ಪರ್ತಗಾಳಿ ಮಠದಲ್ಲಿ ನಡೆಯುತ್ತಿರುವ 550 ನೇಯ ವರ್ಷದ ವರ್ಧಂತಿ ಉತ್ಸವದಲ್ಲಿ ಪ್ರತಿದಿನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಆದರೆ ಎಷ್ಟೇ ಜನ ಭಕ್ತರು ಆಗಮಿಸಿದರೂ ಕೂಡ ಎಲ್ಲ ಭಕ್ತರಿಗೂ ಕೂಡ ಶ್ರೀಗಳು ಮಂತ್ರಾಕ್ಷತೆ ನೀಡಿ ಆಶೀರ್ವದಿಸುತ್ತಿದ್ದಾರೆ. ಆಗಮಿಸುವ ಎಲ್ಲ ಭಕ್ತರಿಗೂ ಕೂಡ ವಸತಿ ಸೇರಿದಂತೆ ಊಟೋಪಚಾರದಲ್ಲಿಯೂ ಕೂಡ ಅಷ್ಟೇ ಕಾಳಜಿಯಿಂದ ಶ್ರೀಮಠ ನೋಡಿಕೊಳ್ಳುತ್ತಿರುವುದು ವಿಶೇಷ.
