ಸುದ್ದಿ ಕನ್ನಡ ವಾರ್ತೆ

ಹೋನ್ನಾವರ: ಮೈಸೂರಿನಿಂದ ಮುರುಡೇಶ್ವರ ಪ್ರವಾಸಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಗೇರುಸೊಪ್ಪಾ ಸಮೀಪದ ಸುಳೆ ಮೂರ್ಕಿ ಕ್ರಾಸ್ ಬಳಿ ಪಲ್ಟಿಯಾಗಿ ಭಾರೀ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ಪವನ್ ಸ್ಥಳದಲ್ಲೇ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಮೈಸೂರಿನ ಟೀಕೆ ಲೇಔಟ್‌ನ ಸರಳಬಾಳು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರವಾಸದಲ್ಲಿದ್ದ ವೇಳೆ ಬಸ್‌ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾಗಿರುವುದಾಗಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಸ್ಥಳೀಯರು ಧಾವಿಸಿ, ಗಾಯಗೊಂಡವರನ್ನು 108 ಹಾಗೂ ಖಾಸಗಿ ಅಂಬ್ಯುಲೆನ್ಸ್‌ಗಳ ಮೂಲಕ ಹೊನ್ನಾವರ ಸರ್ಕಾರಿ ಆಸ್ಪತ್ರೆ ಮತ್ತು ಕುಮಟಾ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.

ಸತತ ಅಪಘಾತಗಳು ನಡೆಯುವ ಈ ಮೂರ್ಕಿ ಕ್ರಾಸ್‌ನ್ನು ತಕ್ಷಣ ಸುರಕ್ಷಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.