ಸುದ್ದಿ ಕನ್ನಡ ವಾರ್ತೆ
ಜೋಯಿಡಾ – ತಾಲೂಕಿನ ,ರಾಜ್ಯದ ಶರಣರ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಉಳವಿ ಚೆನ್ನಬಸವಣ್ಣನ ಮಹಾ ರಥೋತ್ಸವದ ಪೂರ್ವಭಾವಿ ಸಭೆಯು ಇಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಉತ್ತರಕನ್ನಡ ಎ.ಸಿ ಶ್ರವಣಕುಮಾರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಜನವರಿ 25 ರಿಂದ ಫೆಬ್ರವರಿ 5 ರ ವರೆಗೆ ಜಾತ್ರೆ ಜರುಗಲಿದ್ದು ಫೆಬ್ರವರಿ 3 ರಂದು 4 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ.
ಜಾತ್ರೆಗೆ ಪೂರ್ವ ಸಿದ್ದತೆಗಾಗಿ ಸಭೆ ಕರೆದ ಹಿನ್ನೆಲೆಯಲ್ಲಿ ಉತ್ತರಕರ್ನಾಟಕ ಭಾಗದ ರೈತರು ಈ ಬಾರಿ ನಾವೆಲ್ಲರೂ ಜಾತ್ರೆಗೆ ಬರುವುದಾದರೆ ಮೊದಲು ರಸ್ತೆ ಸರಿಪಡಿಸಿ ,ಹೊಂಡಮಯ ರಸ್ತೆಗಳಲ್ಲಿ ನಮ್ಮ ಚಕ್ಕಡಿ, ಟ್ರಾಕ್ಟರ್ ,ಇನ್ನೀತರ ವಾಹನಗಳು ಬರಲು ಸಾಧ್ಯವೇ ಇಲ್ಲ, ಪೋಟೋಲಿ – ಗುಂದ- ಉಳವಿ ರಸ್ತೆ, ಜೋಯಿಡಾ – ಕುಂಬಾರವಾಡಾ – ಉಳವಿ ರಸ್ತೆ, ದಾಂಡೇಲಿ – ಹಳಿಯಾಳ ರಸ್ತೆ ಸೇರಿದಂತೆ ಇನ್ನೀತರ ರಸ್ತೆಗಳನ್ನು ಸರಿಪಡಸಬೇಕು, ಕೈಟಾನಾಲಾ ಸೇತುವೆ ರಿಪೇರಿ ಕೆಲಸ ಪ್ರಾರಂಭಿಸಿದರೆ ಅದಕ್ಕೆ ಬದಲಿ ರಸ್ತೆ ವ್ಯವಸ್ಥೆ ‌ಮಾಡಬೇಕು, ರಸ್ತೆ ಸರಿಪಡಿಸದೆ ಇದ್ದರೆ ನಾವು ಈ ಬಾರಿ ಜಾತ್ರೆಗೆ ಬರುವುದೆ ಇಲ್ಲ ಎಂದು ಪಟ್ಟು ಹಿಡಿದರು, ಸಭೆಯಲ್ಲಿ ರೈತರಿಗೆ ಮತ್ತು ಜೋಯಿಡಾ ಲೋಕೋಪಯೋಗಿ ಇಲಾಕೆ ಅಧಿಕಾರಿಗಳಿಗೆ ಮತ್ತು ಎ ಸಿ ಯವರಿಗೆ ಹಾಗೂ ತಹಶಿಲ್ದಾರ ಜೋಯಿಡಾ ಮತ್ತು ಚನ್ನಬಸವೇಶ್ವರ ಟ್ರಸ್ಟ್ ಕಮಿಟಿಯವರಿಗೆ ವ್ಯವಸ್ಥೆ ಸರಿಪಡಿಸುವಂತೆ ವಾಗ್ವಾದ ನಡೆಯಿತು. ಡಿಸೆಂಬರ್ 15 ರ ಒಳಗೆ ರಸ್ತೆ ಸರಿಪಡಿಸುವ ಭರವಸೆ ಲೋಕೋಪಯೋಗಿ ಎಇಇ ಬಸವರಾಜ ಅವರು ನೀಡಿದರು.

ರೈತರು ಎತ್ತಿನಗಾಡಿಗಳಿಗೆ ಸರಿಯಾದ ಪಾರ್ಕಿಂಗ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೇಳಿ ಕೊಂಡರು, ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರ ಮಾತನಾಡಿ ಎತ್ತುಗಳಿಗೆ ಶಾಕ್ ಕೊಟ್ಟು, ಅಥವಾ ಸರಾಯಿ ಕುಡಿಸಿ ಬೇಕಾಬಿಟ್ಟಿ ಎತ್ತುಗಳನ್ನು ಓಡಿಸಬೇಡಿ, ನಿಧಾನವಾಗಿ ಜಾತ್ರೆಗೆ ಬನ್ನೀ, ಎತ್ತು ನಮ್ಮ ದೇವರು ಅದಕ್ಕೆ ತೊಂದರೆ ನೀಡಿ ಜಾತ್ರೆಗೆ ಬರುವುದು ಸರಿಯಲ್ಲ, ಹಿಂದಿನ ವರ್ಷ ಎರಡು ಎತ್ತುಗಳು ಶಾಕ್ ಕೊಟ್ಟದ್ದರಿಂದ ಸತ್ತಿದೆ, ಇದು ಬೇಸರದ ಸಂಘತಿ.ಎತ್ತುಗಳಿಗೆ ತೊಂದರೆ ನೀಡದೆ ಜಾತ್ರೆಗೆ ಬನ್ನೀ ಇದು ಎಲ್ಲಾ ಭಕ್ತರಲ್ಲಿ ನನ್ನ ವಿನಂತಿ ಎಂದರು.
ಜಾತ್ರೆಯಲ್ಲಿ ಭಕ್ತರಿಗೆ ಉತ್ತಮವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಉಳವಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೋಕಾಶಿ ಸಭೆಯಲ್ಲಿ ಭರವಸೆ ನೀಡಿದರು, ಹೆಚ್ಚುವರಿ ನೀರಿನ‌ ಟ್ಯಾಂಕರ್ ಹಾಗೂ ಸ್ವಚ್ಚತೆಗಾಗಿ ಹೆಚ್ಚಿನ ಜನರನ್ನು ಹಳಿಯಾಳ ,ದಾಂಡೇಲಿ ಇಂದ ನೇಮಿಸಿಕೊಳ್ಳುವಂತೆ ಸಭೆಯಲ್ಲಿ ತಿಳಿಸಲಾಯಿತು.
ಜಾನುವಾರುಗಳಿಗೆ ಹಾಗೂ ಜನರಿಗೆ ಅನಾರೋಗ್ಯವಾದಲ್ಲಿ ದಿನದ 24 ಗಂಟೆ ಸಹಕಾರ ನೀಡುವಂತೆ ಆರೋಗ್ಯ ಇಲಾಕೆ ಮತ್ತು ಪಶು ಇಲಾಕೆ ಸಿಬ್ಬಂದಿಗಳಿಗೆ ಸೂಚಿಸಲಾಯಿತು.
ಜಾತ್ರೆಯಲ್ಲಿ ಸಂಪೂರ್ಣ ಸರಾಯಿ ನಿಷೇಧ ಮಾಡಬೇಕು ಜಾತ್ರೆಯ ಹಿಂದಿನ ದಿನ ಹಾಗೂ ಜಾತ್ರೆ ದಿನ ಸಂಪೂರ್ಣ ಸರಾಯಿ ನಿಷೇಧ ಮಾಡುವಂತೆ ಸೂಚಿಸಲಾಯಿತು.
ಡಿ.ವೈ ಎಸ್ ಪಿ ಶಿವಾನಂದ ಎಮ್ ಮಾತನಾಡಿ ಮುಖ್ಯವಾಗಿ ಎಲ್ಲಾ ವಾಹನದವರು ಹಾಗೂ ಚಕ್ಕಡಿಯವರು ತಮ್ಮ ವಾಹನಗಳಿಗೆ ರೆಡಿಯಮ್‌ ಹಾಕಬೇಕು ಇದರಿಂದ ಅಪಘಾತ ತಪ್ಪುತ್ತದೆ, ಜಾತ್ರೆಯಲ್ಲಿ ಕೇವಲ ಪೋಲಿಸ್ ಇಲಾಕೆಯಿಂದ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ, ಎಲ್ಲಾ ಇಲಾಕೆಯವರ ಸಹಕಾರ ಮುಖ್ಯ, ಟ್ರಸ್ಟ್ ಕಮಿಟಿ ಅವರು ಸರ್ಕಾರದ ಆದೇಶವನ್ನು ಪಾಲಿಸಿ ಜಾತ್ರೆ ನಡೆಸಬೇಕು, ತೇರಿನ ಸಂದರ್ಭದಲ್ಲಿ ಎಲ್ಲರಿಗೂ ರಥೋತ್ಸವ ಕಾಣುವಂತೆ ದೊಡ್ಡ ಸ್ಕ್ರೀನ್ ವ್ಯವಸ್ಥೆ ಕಮಿಟಿಯವರು ಮಾಡಬೇಕು ,ಜಾತ್ರೆಗೆ ಪೋಲಿಸ್ ಇಲಾಕೆಯಿಂದ ಬಿಗಿಬಂದೋಬಸ್ತ ಎರ್ಪಡಿಸಲಾಗುತ್ತದೆ ಎಂದರು.

ಇನ್ನೂಳಿದಂತೆ ಸಾರಿಗೆ ಬಸ್ಸ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಪ್ಲಾಸ್ಟಿಕ್ ಕಸ ಎಸೆಯದಂತೆ , ಹಾಗೂ ಶಿವಪುರ ರಸ್ತೆ ರಿಪೇರಿ, ತೂಗು ಸೇತುವೆ ಬಳಿ ಪೋಲಿಸ್ ಕಾವಲು ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಎಮ್ ಎಲ್ ಸಿ ಗಣಪತಿ ಉಳ್ವೇಕರ ಜೋಯಿಡಾ ತಹಶಿಲ್ದಾರ ಮಂಜುನಾಥ ಮೊನ್ನೋಳಿ, ಇಓ ಭಾರತಿ ಎಂ, ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಪ್ರಕಾಶ ಕಿತ್ತೂರ,ಸದಸ್ಯ ಬಿ‌.ಸಿ ಉಮಾಪತಿ, ವಿರೇಶ ಕಂಬಳಿ,ಸಿಪಿಐ ಚಂದ್ರಶೇಖರ ಹರಿಹರ, ಪಿ.ಎಸ್ ಐ ಮಹೇಶ ಮಾಳಿ,ಇತರ ಎಲ್ಲಾ ಇಲಾಕೆ ಅಧಿಕಾರಿಗಳು ರೈತರು ಇದ್ದರು‌.