ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸೊಂದು ಕಂದಕಕ್ಕೆ ಬಿದ್ದು ಹಲವು ಜನ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ರಾ.ಹೆದ್ದಾರಿ ೬೩ ರಲ್ಲಿ ಅಂಕೋಲಾ ತಾಲೂಕಿನ ವಜ್ರಳ್ಳಿ ಸಮೀಪದಲ್ಲಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಈ ಘಟನೆಯಲ್ಲಿ ೧೫-೨೦ ರಷ್ಟು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಂದಿಬ್ಬರ ಸ್ಥಿತಿ ಗಂಭೀರವಾಗಿದ್ದು ಯಾರೆಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾ ಹಾಗೂ ಯಲ್ಲಾಪುರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅಂಬುಲನ್ಸ್ ಮೂಲಕ ಗಾಯಾಳುಗಳಿಗೆ ಚಿಕಿತ್ಸೆನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಬಸ್ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಅಂಕೋಲಾ ಬಾಳೆಗುಳಿ ಬಳಿಯಿಂದ ಯಲ್ಲಾಪುರ ಮಾರ್ಗಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹೊಂಡಮಯವಾಗಿದೆ. ಈ ಬಸ್ ಅಪಘಾತಕ್ಕೂ ಕೂಡ ರಸ್ತೆ ಹದಗೆಟ್ಟಿರುವುದೇ ಕಾರಣವೇ ಎಂಬುದು ಗೊತ್ತಾಗಬೇಕಿದೆ.
ಈ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದರು ಕೂಡ KSRTC ಬಸ್ ಚಾಲಕರು ಅತಿ ವೇಗವಾಗಿ ಬಸ್ ಓಡಿಸಿಕೊಂಡು ಹೋಗುತ್ತಿದ್ದು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ. ಈ ರೀತಿಯಾಗಿ ಅತಿ ವೇಗವಾಗಿ ಚಾಲನೆ ಮಾಡಿರುವುದರಿಂದಲೇ ಇಂದಿನ ಅಪಘಾತ ಸಂಭವಿಸಿರಬಹುದು ಎಂದು ಊಹಿಸಲಾಗುತ್ತಿದೆ.
ಕಳೆದ ಅನೇಕ ದಿನಗಳಿಂದ ರಸ್ತೆ ಸಂಪೂರ್ಣವಾಗಿ ಹದಗಟ್ಟಿದ್ದರು ಕೂಡ ಜನಪ್ರತಿನಿಧಿಗಳು ಈ ಕುರಿತು ನಿರ್ಲಕ್ಷ ತೋರಿರುವಂತೆ ಕಂಡು ಬರುತ್ತಿದೆ. ತುರ್ತಾಗಿ ಕನಿಷ್ಠಪಕ್ಷ ರಸ್ತೆ ಹೊಂಡವನ್ನು ಮುಚ್ಚುವ ಕೆಲಸವನ್ನು ಕೂಡ ಮಾಡುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ನಿರ್ವಹಿಸದಿರುವುದು ಬೇಸರದ ಸಂಗತಿಯೇ ಸರಿ. ಇದರಿಂದಾಗಿ ಈ ಮಾರ್ಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ.
