ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಜೋಯಿಡಾ ಗ್ರಾಮದ ಮಾರ್ಲಿಯ ಪ್ರದೇಶದ ಮಕ್ಕಳು ಶಿಕ್ಷಣಕ್ಕಾಗಿ, ಖಾನಗಾಂವ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ದಿನನಿತ್ಯ ಮನೆಯಿಂದ ಶಾಲೆಗೆ ಹೋಗಿ ಬರುವ ಸುಮಾರು 3 ರಿಂದ 4ಕಿ.ಮೀ ದೂರ ಕ್ರಮಿಸುವ ಜೊತೆಗೆ ಒಬ್ಬ ರಕ್ಷಕನ ಅನಿವಾರ್ಯತೆ. ಈಗಿನ ಕಾಲದಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವ ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

 

ಆದರೆ ಮಾರ್ಲಿಯ ಪಾಲಕರ,ಮಕ್ಕಳ ಶಿಕ್ಷಣದ ಕಾಳಜಿಯ ಬಗ್ಗೆ ಎಲ್ಲರೂ ಮೆಚ್ಚಲೇ ಬೇಕಾದ ವಿಷಯ. ಮಾರ್ಲಿಯ ಮೂಲಕ ರಸ್ತೆಯ ಮಾರ್ಗದ ಮೂಲಕ ಖಾನಗಾಂವ ಶಾಲೆಗೆ ತಲುಪಬೇಕಾದರೆ, ಸುಮಾರು 5 ರಿಂದ 6 ಕಿ.ಮೀ ದೂರ ಕ್ರಮಿಸಬೇಕು.ಆದರೆ ಹತ್ತಿರದ ದಾರಿ ಕಾಡು,ಮೇಡುಗಳ ನಡುವೆ 3 ರಿಂದ 4 ಕಿ.ಮೀ ಶಾಲೆಗೆ ಹೋಗಿ ಬರುವ ದೂರದ ಜೊತೆಗೆ,ದಿನನಿತ್ಯ ಸುರಕ್ಷತೆಯ ದೃಷ್ಟಿಯಿಂದ ಒಬ್ಬರು ಅವರ ಜೊತೆಗೆ ನಡೆದುಕೊಂಡು ಬರುವ ಅನಿವಾರ್ಯ ಪರಿಸ್ಥಿತಿ. ಮಳೆಗಾಲದಲ್ಲಿ ತೀವ್ರ ತೊಂದರೆಯನ್ನು ಅನುಭವಿಸ ಬೇಕಾದ ಪರಿಸ್ಥಿತಿ ಇಲ್ಲಿನ ಮಕ್ಕಳ,ಪಾಲಕರದ್ದಾಗಿದೆ.

 

ಆಡಳಿತ ವ್ಯವಸ್ಥೆಯು ಗುಣಮಟ್ಟದ ಶಿಕ್ಷಣ ನೀಡಲು ಒತ್ತು ನೀಡುತ್ತೀರುವ ಸಂದರ್ಭದಲ್ಲಿ ಇಲ್ಲಿನ ಮಕ್ಕಳ, ಪಾಲಕರ ಶಿಕ್ಷಣದ ಬಗೆಗಿನ ಕಾಳಜಿಯನ್ನು ಮೆಚ್ಚಿ ಮೂಲಭೂತ ಸೌಕರ್ಯಗಳಾದ ಸರ್ವ ಋತು ರಸ್ತೆ, ಸಾರಿಗೆ,ದೂರ ಸಂಪರ್ಕ ವ್ಯವಸ್ಥೆಯ ಕಡೆಗೆ ಆದ್ಯತೆ ನೀಡಲಿ ಎಂಬುದು ಶಿಕ್ಷಣ ಪ್ರೇಮಿಗಳ ಕೋರಿಕೆಯಾಗಿದೆ.