ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ, ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ)ಸರಕಾರಿ ಪ್ರೌಢಶಾಲೆ ಗುಂದ ಇವರ ಸಂಯುಕ್ತಾಶ್ರಯದಲ್ಲಿ ಕುಂಬಾರವಾಡಾ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ರ ಕಾರ್ಯಕ್ರಮ ದಿನಾಂಕ:18-11-2025 ರ ಮಂಗಳವಾರ ಸರಕಾರಿ ಪ್ರೌಢಶಾಲೆ ಶಾಲೆ ಗುಂದದಲ್ಲಿ ವಿಜ್ರಂಭಣೆಯಿಂದ ಸಂಪನ್ನಗೊಂಡಿತು. ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸಫ್ ಬಿ ಗೊನ್ಸಾಲ್ವಿಸ್ ರವರು ಗುಂದ ಪ್ರೌಢಶಾಲೆಯ ವತಿಯಿಂದ ಸಂಘಟಿಸಿದ ಕುಂಬಾರವಾಡಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯವರು,ಶಿಕ್ಷಕ ವೃಂದದವರು,ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ವಲಯ ಅರಣ್ಯಾಧಿಕಾರಿಗಳು, ನಂದಿಗದ್ದಾಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಗುತ್ತಿಗೆದಾರರು,ಇನ್ನಿತರ ಗಣ್ಯರು,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರು,ಪೋಷಕರು,ಶಿಕ್ಷಣ ಪ್ರೇಮಿಗಳು ತನು ಮನ ಧನದ ಸಹಕಾರ ನೀಡಿದ ಪರಿಣಾಮ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಪ್ರತ್ಯಕ್ಷ, ಪರೋಕ್ಷವಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಚಿರಋಣಿ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಹಾದೇವ ವೇಳಿಪ,ನಂದಿಗದ್ದೆ ಕ್ಲಸ್ಟರಿನ ಸಿ.ಆರ್.ಪಿ ಭಾಸ್ಕರ ಗಾಂವ್ಕರ,ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಪ್ರಿಯಾ ಸಾವರಕರ,ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್,ಸಹ ಶಿಕ್ಷಕರಾದ ಸಂತೋಷ ರಾಯಕರ,ಶ್ರೀಕಾಂತ ನಾಯ್ಕ,ಭುವನೇಶ್ವರ ಮೇಸ್ತಾ, ಪ್ರಿಯಾ ದೇಸಾಯಿ,ರಶ್ಮಿ ಹಳದಿಪುರ,ಪಾರ್ವತಿ ನಾಯಕ,ಸತೀಶ ವೇಳಿಪ,ಎ ಆರ್ ಗೌಡ ಇನ್ನುಳಿದ ಶಿಕ್ಷಕರು ಇದ್ದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಂಠಪಾಠ,ಧಾರ್ಮಿಕ ಪಠಣ, ಪ್ರಬಂಧ ರಚನೆ,ಭಾವಗೀತೆ, ಚಿತ್ರಕಲೆ,ಕವ್ವಾಲಿ,ಕ್ವಿಜ್,ಆಶು ಭಾಷಣ,ಮಿಮಿಕ್ರಿ,ಜಾನಪದ ನೃತ್ಯ ಸೇರಿದಂತೆ ಇನ್ನಿತರ ಸ್ಪರ್ಧೆಗಳಲ್ಲಿ ಅಣಶಿ,ಉಳವಿ,ಕುಂಬಾರವಾಡಾ,ಗುಂದ ಪ್ರೌಢಶಾಲೆಯ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ,ಶೀಲ್ಡ್,ನೋಟ್ ಪುಸ್ತಕವನ್ನು ವೇದಿಕೆಯ ಮೇಲಿನ ಗಣ್ಯರು ವಿತರಿಸಿದರು. ಕಾರ್ಯಕ್ರಮದಲ್ಲಿ ನಿರ್ಣಾಯಕರಿಗೆ ಸಹಕರಿಸಿದ ಎಲ್ಲರಿಗೂ ಪೆನ್ನನ್ನು ನೀಡಲಾಯಿತು. ಶಾಲಾ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು,ಪಾಲಕರು, ಪೋಷಕರು,ಅಡುಗೆಯವರು ತಯಾರಿಸಿದ ಶುಚಿ,ರುಚಿಯಾದ ಊಟದ ವ್ಯವಸ್ಥೆ,ಅತಿಥಿ ಸತ್ಕಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕೊನೆಯಲ್ಲಿ ಕಾರ್ಯಕ್ರಮ ನಿರೂಪಿಸಿ,ವಂದನಾರ್ಪಣೆ ನುಡಿಗಳನ್ನಾಡಿದ ಪ್ರೌಢಶಾಲೆಯ ಸಹ ಶಿಕ್ಷಕರಾದ ಗೋಕುಲ ಸ್ಥಳೇಕರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಹೃದಯ ಪೂರ್ವಕವಾಗಿ ವಂದಿಸಿದರು.ಕಾರ್ಯಕ್ರಮದ ಯಶಸ್ಸಿಗೆ ಪ್ರೌಢಶಾಲೆಯ ಸಹ ಶಿಕ್ಷಕರಾದ ಫಕೀರಪ್ಪ ದರಿಗೊಂಡ, ನವೀನ ಶೇಟ, ಪುರುಷೋತ್ತಮ ಜಿ,ದಿವ್ಯಾ ಮೇಡಂ, ರಿಯಾ, ಬಸವರಾಜ ಸಹಕಾರ ನೀಡಿದರು.
