ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳು ವೈದ್ಯರವರು ಕೇವಲ ಕೇಂದ್ರ ಸರ್ಕಾರ ಮತ್ತು ಕ್ರಿಯಾಶೀಲ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮೇಲೆ ದೂಷಣೆ ಮಾಡುವುದು ಬಿಟ್ಟು, ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತು ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾ ಬಿಜೆಪಿ ವಕ್ತಾರ ಶ್ರೀ ಸದಾನಂದ ಭಟ್ ನಿಡಗೋಡ ಅವರು ತೀವ್ರವಾಗಿ ಆಗ್ರಹಿಸಿದ್ದಾರೆ.
ಕಾಗೇರಿಯವರ ಕುರಿತು ಆಗಾಗ ವೈಯಕ್ತಿಕ ಟೀಕೆಗಳನ್ನು ಮಾಡುವ ಮಟ್ಟಕ್ಕೆ ಸಚಿವರು ಇಳಿದಿರುವುದನ್ನು ನೋಡಿದರೆ, ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹತಾಶೆಯಿಂದ ಈ ಮಾತನ್ನು ಹೇಳುತ್ತಿದ್ದಾರೆ ಎಂದು ಎನಿಸುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಿರುವ ಮಳೆ ಹಾನಿ ಕುರಿತು ಪರಿಹಾರ ಒದಗಿಸದೆ, ಪದೇಪದೇ ಒತ್ತಾಯಿಸಿದರೂ ಸಹ ಮಳೆಮಾಪನ ಕೇಂದ್ರಗಳನ್ನು ಸರಿಪಡಿಸದೆ, ನವೆಂಬರ್‌ನಲ್ಲಿ ಬರಬೇಕಾಗಿದ್ದ ಬೆಳೆ ವಿಮೆಯನ್ನು ಕೊಡಿಸುವ ಬಗ್ಗೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳದಿರುವುದು ಸಚಿವರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಜಿಲ್ಲೆಯ ರೈತರಿಗೆ 2024 25 ನೇ ಸಾಲಿನ ಹಕ್ಕಿನ ಹವಾಮಾನ ಆಧಾರಿತ ಬೆಳೆ ವಿಮೆ ಅಂದಾಜು ಮೊತ್ತ 80 ಕೋಟಿ ರೂಪಾಯಿಯನ್ನು ರೈತರಿಗೆ ತಕ್ಷಣ ಕೊಡಿಸಲು ಜವಾಬ್ದಾರಿಯನ್ನು ಉಸ್ತುವಾರಿ ಸಚಿವರು ವಹಿಸಿಕೊಳ್ಳುತ್ತಾರೋ ಎಂಬುದನ್ನು ಸ್ಪಷ್ಟಪಡಿಸಲಿ.
ರಸ್ತೆ ಸುಧಾರಣೆಗಳಿಗೆ ಅನುದಾನ ಬಿಡುಗಡೆ ಮಾಡದೆ ಕೇವಲ ಬಣ್ಣದ ಮಾತುಗಳಿಂದ ಕೇಂದ್ರ ಸರಕಾರದ ಕುರಿತು ಮತ್ತು ಸಂಸದರ ಕುರಿತು ಟೀಕೆಯ ಮಾತನಾಡುವುದು ಸರಿಯಲ್ಲ. ಜಿಲ್ಲೆಯಲ್ಲಿ ಹಿಂಭಾಗಲಿನಿಂದ ಅನುಷ್ಠಾನಗೊಳಿಸಲು ಯೋಜಿಸುತ್ತಿರುವ ಜನ ವಿರೋಧಿ ಯೋಜನೆಗಳಾದ ಶರಾವತಿ ಪಂಪುಡ್ ಯೋಜನೆ, ಕೇಣಿ ಬಂದರು ಯೋಜನೆ ಮತ್ತು ನದಿ ತಿರುವು ಯೋಜನೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸ್ಪಷ್ಟ ನಿರ್ಧಾರವನ್ನು ಕ್ಯಾಬಿನೆಟ್‌ನಲ್ಲಿ ತಕ್ಷಣ ಮಂಡಿಸಬೇಕು.
ರಾಜ್ಯ ಸರ್ಕಾರದಿಂದ ಕಳೆದ ಎರಡುವರೆ ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಹೊಸ ಅಭಿವೃದ್ಧಿ ಯೋಜನೆಯನ್ನು ನೀಡದ ರಾಜ್ಯ ಸರಕಾರದ ಭಾಗವಾಗಿರುವ ಇವರು, ಗುತ್ತಿಗೆದಾರರಿಗೆ ಕೇಂದ್ರ ಸರಕಾರದಿಂದ ಬಿಲ್ ಆಗಿಲ್ಲ ಮತ್ತು ಕೇಂದ್ರ ಸರ್ಕಾರ ದಿವಾಳಿಯಾಗಿದೆಯೇ ಎಂದು ಪ್ರಶ್ನಿಸುವುದನ್ನು ನೋಡಿದರೆ ಸಚಿವರ ಕಾರ್ಯಕ್ಷಮತೆಯ ಬಗ್ಗೆ ಸಂಶಯ ಮೂಡುತ್ತದೆ.
ಅಕ್ರಮವಾಗಿ ಗೋವುಗಳನ್ನು ಕದ್ದು ಸಾಗಿಸುವವರಿಗೆ ಗುಂಡು ಹಾರಿಸಬೇಕು ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡುವ ಸಚಿವರು, ಮೊದಲು ತಮ್ಮ ಕ್ಷೇತ್ರದಲ್ಲಿಯೇ ನಡೆಯುತ್ತಿರುವ ಗೋ ಕಳ್ಳತನದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿ. ಸಚಿವರು ಮೊದಲು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರವಾಸ ಮಾಡಿ, ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ನೀಡಿ, ಜನತೆಯ ಸಮಸ್ಯೆಗಳನ್ನು ಗಮನಿಸಿ ಜಿಲ್ಲೆಯಲ್ಲಿ ಜನಪರ ಆಡಳಿತಕ್ಕೆ ಅಗತ್ಯ ಕ್ರಮ ಕೈಗೊಂಡು, ನಂತರ ಉಳಿದವರನ್ನು ಟೀಕಿಸಲಿ ಎಂದು ಸದಾನಂದ ಭಟ್ ನಿಡಗೋಡ ಅವರು ಆಗ್ರಹಿಸಿದ್ದಾರೆ.
ಸದಾನಂದ ಭಟ್ ನಿಡಗೋಡ
ವಕ್ತಾರರು, ಜಿಲ್ಲಾ ಬಿಜೆಪಿ,
ಉತ್ತರ ಕನ್ನಡ.
