ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ, ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ)ಸರಕಾರಿ ಪ್ರೌಢಶಾಲೆ ಗುಂದ ಇವರ ಸಂಯುಕ್ತಾಶ್ರಯದಲ್ಲಿ ಕುಂಬಾರವಾಡಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ರ ಕಾರ್ಯಕ್ರಮ ದಿನಾಂಕ:18-11-2025 ರ ಮಂಗಳವಾರ ಸರಕಾರಿ ಪ್ರೌಢಶಾಲೆ ಶಾಲೆ ಗುಂದದಲ್ಲಿ ಅದ್ಧೂರಿ ಚಾಲನೆ ನೀಡಿಲಾಯಿತು. ವೇದಿಕೆಗೆ ಗಣ್ಯರನ್ನು ಪ್ರೌಢಶಾಲೆಯ ಸಹ ಶಿಕ್ಷಕರಾದ ಗೋಕುಲ ಸ್ಥಳೇಕರ ಸ್ವಾಗತಿಸಿ, ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರೂಪಿಸಿದರು. ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಯಲು ರಂಗಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಪ್ರಾರ್ಥನೆ,ಸ್ವಾಗತ ಗೀತೆಯೊಂದಿಗೆ ಆರಂಭಿಸಲಾಯಿತು. ವೇದಿಕೆಗೆ ಗಣ್ಯರನ್ನು ವಿದ್ಯಾರ್ಥಿಗಳಿಂದ ಪುಷ್ಪ ನೀಡುವ ಮೂಲಕ ಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸೆಪ ಸರ್ ಅವರು ಆತ್ಮೀಯವಾಗಿ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ದೇಸಾಯಿ ಮಾತನಾಡಿ ನಂದಿಗದ್ಧೆ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳ ಶಿಕ್ಷಕರು ಕೆಲವು ಕೊರತೆಗಳ ನಡುವೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇಲ್ಲಿನ ಪ್ರೌಢಶಾಲೆಯ,ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲೂಕು,ಜಿಲ್ಲಾ,ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿ ಶಾಲೆಯ,ಊರಿನ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ.ಘನ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಯೋಜನೆಗಳ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈಗಾಗಲೇ ನಮ್ಮ ಪಂಚಾಯತ ವತಿಯಿಂದ ಎಲ್ಲಾ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಿದ್ದೇವೆ, ಮುಂದಿನ ದಿನಗಳಲ್ಲಿ ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದು ಹೇಳಿದರು.ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ ವತಿಯಿಂದ ಹಾಗೂ ವೈಯುಕ್ತಿಕವಾಗಿ ಧನ ಸಹಾಯ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಂದಿಗದ್ದಾ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ದಾನಗೇರಿ ಮಾತನಾಡಿ ಗುಂದ ಸರಕಾರಿ ಪ್ರೌಢಶಾಲೆ ಮಂಜೂರಾತಿಗೆ ಅಂದಿನ ಶಾಸಕರು,ಉಸ್ತುವಾರಿ ಸಚಿವರ ಸಮಯೋಚಿತ ಕೆಲಸದಿಂದ, ಊರಿನ ಗಣ್ಯರ ಶ್ರಮದಿಂದ ಕಟ್ಟಡ,ಪಂಚಾಯತ ವತಿಯಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ,ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದ್ದು,ಇಲ್ಲಿನ ಶಿಕ್ಷಕರು ಉತ್ತಮ ಕೆಲಸ ಮಾಡುತ್ತಿದ್ದು,ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ, ಕಾರ್ಯಕ್ರಮಕ್ಕೆ ವೈಯುಕ್ತಿಕವಾಗಿ ಧನ ಸಹಾಯ ಮಾಡಿದರು. ಇಲಾಖಾ ಪರವಾಗಿ ಆಗಮಿಸಿದ್ದ ನಂದಿಗದ್ದೆ ಕ್ಲಸ್ಟರಿನ ಸಿ.ಆರ್.ಪಿ ಭಾಸ್ಕರ ಗಾಂವ್ಕರ ಮಾತನಾಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಕುರಿತು,ತಾಲೂಕಿನ ಸದ್ಯದ ಹಾಗೂ ಮುಂದಿನ ಶೈಕ್ಷಣಿಕ ಕ್ಷೇತ್ರದಲ್ಲಿನ ಸವಾಲುಗಳು,ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ,ಪ್ರತಿಭಾ ಕಾರಂಜಿ ಮಕ್ಕಳ ಕನಸುಗಳ ಹರಿವಿನ ಉತ್ಸವ,ಮನದ ಮಿಂಚಿನ ಮೇಳ,ಪ್ರತಿಭೆ ದೇವರ ಕೊಡುಗೆ,ಅದು ದೇವರು ಕೊಟ್ಟ ವರ,ಆದರೆ ಪ್ರಯತ್ನ ನಮ್ಮ ಪ್ರತಿಕ್ರಿಯೆ.ಪರೀಕ್ಷೆ ಅಂಕಗಳನ್ನು ಅಳೆಯುತ್ತದೆ;ಆದರೆ ಪ್ರತಿಭೆ ವ್ಯಕ್ತಿತ್ವವನ್ನು ಅಳೆಯುತ್ತದೆ.ಪ್ರತಿಭೆ ಯಾರೊಬ್ಬರ ಸೊತ್ತಲ್ಲ;ಅದನ್ನು ಬೆಳಗಿಸಲು ಶಿಕ್ಷಕರ ಶ್ರಮ, ಮಾರ್ಗದರ್ಶನದ ಜೊತೆಗೆ ಗುರುಹಿರಿಯರ ಆಶೀರ್ವಾದ ಅಗತ್ಯ. ಕಲೆ ಇದ್ದಲ್ಲಿ ಸಂಸ್ಕೃತಿ ಗಟ್ಟಿಯಾಗಿರುತ್ತದೆ,ಸಂಸ್ಕೃತಿ ಇದ್ದಲ್ಲಿ ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲು ಸಾಧ್ಯ.ಪೋಷಕರು ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕು.ಮಕ್ಕಳ ಪ್ರತಿಭೆಗೆ ಸೂಕ್ತ ನ್ಯಾಯ ಒದಗಿಸುವ ಅವಕಾಶವನ್ನು ಪ್ರತಿಭಾ ಕಾರಂಜಿಯಲ್ಲಿ ಅಳವಡಿಸಲಾಗಿದೆ.ಮಕ್ಕಳ ಪ್ರತಿಭೆಯನ್ನು ಗುರುತಿಸಿ,ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಆಶಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂದ ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಹಾದೇವ ವೇಳಿಪ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ,ಗ್ರಾಮ ಪಂಚಾಯತ ಸದಸ್ಯರಾದ ಶೋಭಾ ಆರ್, ಸುಮನಾ ಹರಿಜನ,ಶಾಲೆಯ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಪ್ರಿಯಾ ಸಾವರಕರ,ಉಳವಿ ಪ್ರೌಢಶಾಲೆಯ ಸಹ ಶಿಕ್ಷಕಿ ಪ್ರಿಯಾ ದೇಸಾಯಿ,ಅಣಶಿ ಶಾಲೆಯ ಸಹ ಶಿಕ್ಷಕರಾದ ಪ್ರಸಾದ ನಾಯ್ಕ, ನಂದಿಗದ್ದೆ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಮಂಗಲಾ ಉಪಾಧ್ಯ,ನಂದಿಗದ್ದೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಭುವನೇಶ್ವರ ಮೇಸ್ತಾ ಇದ್ದರು.ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಫಕೀರಪ್ಪ ದರಿಗೊಂಡ ಎಲ್ಲರನ್ನು ವಂದಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಗಣ್ಯರಿಗೆ,ಶಿಕ್ಷಕ ವೃಂದದವರಿಗೆ,ಮಕ್ಕಳಿಗೆ ಉಪಹಾರವನ್ನು ಸಂಘಟಕರಿಂದ ನೀಡಲಾಯಿತು.