ಸುದ್ದಿ ಕನ್ನಡ ವಾರ್ತೆ

ಕಳೆದ 5-6 ದಿನಗಳಿಂದ ಪ್ರತಿಟನ್ ಕಬ್ಬಿಗೆ 3500 ದರ ನೀಡಲು ಒತ್ತಾಯಿಸಿ ನಡೆಯುತ್ತಿದ್ದ ಕಬ್ಬಿನ ದರ ಹೋರಾಟವು ತಾರಕ್ಕೇರಿದ ಪರಿಣಾಮ ಸಮೀಪದ ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿದ ರೈತರು ಗುರುವಾರ ಸಂಜೆ ಕಾರ್ಖಾನೆ ಆವರಣದಲ್ಲಿ ಕಬ್ಬು ತುಂಬಿಕೊಂಡು ಸರತಿ ಸಾಲಿನಲ್ಲಿ ನಿಂತಿದ್ದ ನೂರಾರು ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶಪಡಿಸಿದ ಘಟನೆಯು ಜರುಗಿದೆ.

ಸಮೀರವಾಡಿ ಕಾರ್ಖಾನೆಯವರು ಗುರುವಾರ ಮುಂಜಾನೆ ಕಬ್ಬು ನುರಿಸುವದನ್ನು ಪ್ರಾರಂಭಿಸಿದನ್ನು ಖಂಡಿಸಿದ ಹೋರಾಟ ನಿರತ ರೈತರು, ಕಾರ್ಖಾನೆ ಅಧಿಕಾರಿಗಳು ಮತ್ತು ಮಾಲೀಕರ ಜೊತೆಗೆ ಮಾತನಾಡಲು ಮುಧೋಳದಿಂದ ನೂರಾರು ಟ್ರಾಕ್ಟರ್‌ಗಳು, ಬೈಕಗಳ ಮೂಲಕ ನೂರಾರು ಸಂಖ್ಯೆಯಲ್ಲಿ ಸಮೀರವಾಡಿ ಗೋದಾವರಿ ಶುಗರ್ಸ್ ಗೆ ಆಗಮಿಸಿದ ವೇಳೆ, ಮುಧೋಳದಿಂದ ಆಗಮಿಸಿದ ಹೋರಾಟನಿರತ ರೈತರು ಮತ್ತು ಗೋದಾವರಿ ಕಾರ್ಖಾನೆಯ ಪರ ರೈತರ ನಡುವೆ ಮಾತಿನ ಚಕಮಕಿಯು ನಡೆದು, ಪರಸ್ಪರ ವಾಗ್ವಾದ ತಾರಕಕ್ಕೇರಿ ಕಲ್ಲು ತುರಾಟದವರೆಗೆ ನಡೆದ ಪರಿಣಾಮ ಆಕ್ರೋಶಗೊಂಡ ರೈತರು ಕಾರ್ಖಾನೆಯ ಆವರಣದಲ್ಲಿ ಕಬ್ಬು ತುಂಬಿ ನಿಂತಿದ್ದ 140ಕ್ಕೂ ಅಧಿಕ ಟ್ರಾಕ್ಟ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚುವರಿ ಎಸ್‌ಪಿಗೆ ಕಾಲಿಗೆ ಪೆಟ್ಟು :
ಗುರುವಾರ ಸಂಜೆ ನಡೆದ ರೈತರ ಹೋರಾಟದ ಘರ್ಷನೆಯಲ್ಲಿ ಬಂದೋಬಸ್ತ್ ಆಗಮಿಸಿದ್ದ ಬಾಗಲಕೋಟೆ ಹೆಚ್ಚುವರಿ ಎಸ್ಪಿ ಮಹಾಂತೇಶ ಜಿದ್ದಿ ಅವರಿಗೆ ಕಾಲಿಗೆ ದೊಡ್ಡ ಕಲ್ಲು ಬಡಿದ ಪರಿಣಾಮ, ಅವರ ಎಡಗಾಲಿಗೆ ತೀವೃಗಾಯವಾಗಿದ್ದು. ಮಹಾಲಿಂಗಪುರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಾಗಲಕೋಟೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪಟ್ಟಣದ ಖಾಸಗಿ ಆಸ್ಪತ್ರೆಗೆ ಆಗಮಿಸಿದ ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯೆಲ್ ಅವರು ಅಂಬ್ಯೂಲೆನ್ಸ್ ನಲ್ಲಿ ಸೂಕ್ತ ಬಂದೋಬಸ್ತ್ ಮೂಲಕ ಗಾಯಗೊಂಡ ಹೆಚ್ಚುವರಿ ಎಸ್‌ಪಿ ಅವರನ್ನು ಬಾಗಲಕೋಟೆಗೆ ಕರೆದೊಯ್ದರು.
ಕಾಂಗ್ರೆಸ್ ಮುಖಂಡನಿಗೂ ಗಾಯ :
ಘಟನೆಯಲ್ಲಿ ಸಮೀರವಾಡಿಯ ಕಾಂಗ್ರೆಸ್ ಮುಖಂಡ ವಿಠ್ಠಲ ಹೊಸಮನಿ ಅವರು ಗಾಯಗೊಂಡಿದ್ದು, ಮಹಾಲಿಂಗಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನೂರಾರು ಟ್ರಾಕ್ಟರ್‌ಗಳಿಗೆ ಬೆಂಕಿ :
ರೈತರ ಕಬ್ಬಿನ ದರ ಹೋರಾಟವು ಇಂದು ಘರ್ಷಣೆಯ ರೂಪಕ್ಕೆ ತಳಿದ ಪರಿಣಾಮ, ಆಕ್ರೋಶಕ್ಕೆ ಸಮೀರವಾಡಿ ಕಾರ್ಖಾನೆಯ ಆವರಣದಲ್ಲಿ ಕಬ್ಬು ತುಂಬಿ ನಿಂತಿದ್ದ ನೂರಾರು ಟ್ರಾಕ್ಟರ್‌ಗಳಿಗೆ ಬೆಂಕಿ ತಗುಲಿ ಲಕ್ಷಾಂತರ ಹಾನಿ ಸಂಭವಿಸಿದೆ.

ಹಲವರಿಗೆ ಗಾಯ :
ಸಮೀರವಾಡಿಯಲ್ಲಿ ನಡೆದ ರೈತರ ಸಂಘರ್ಷದಲ್ಲಿ ಹಲವಾರು ಪೊಲೀಸ್‌ರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ರೈತರಿಗೆ, ರೈತ ಮುಖಂಡರಿಗೂ ಗಾಯಗಳಾದ ವರದಿಯಾಗಿವೆ.
*ಬೆಂಕಿ ನಂದಿಹಸಲು ಹರಸಾಹಸ :
ಏಕಕಾಲಕ್ಕೆ ನೂರಾರು ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಕಾರ್ಖಾನೆ ಮತ್ತು ರಬಕವಿ ಬನಹಟ್ಟಿ ಅಗ್ನಿಶಾಮಕ ವಾಹಗಳು ಮತ್ತು ಸಿಬ್ಬಂದಿಯು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಕಬ್ಬಿನ ಗಾಡಿ ಚಾಲಕರು ಮತ್ತು ಮಾಲೀಕರು ತಮ್ಮ ತಮ್ಮ ಟ್ರಾಕ್ಟರ್‌ಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದ ದೃಶ್ಯಗಳು ಮನಕಲಕುವಂತಿತ್ತು.

ಆಕ್ರೋಶದ ರಣಾಂಗಣವಾದ ಸಮೀರವಾಡಿ :
ಗುರುವಾರ ಸಂಜೆ ಸಮೀರವಾಡಿ ಕಾರ್ಖಾನೆಯು ಅಕ್ಷರಶಹ: ರೈತರ ಆಕ್ರೋಶದ ರಣಾಂಗಣವಾಗಿತ್ತು. ಘಟನೆಯಲ್ಲಿ ಕೆಲವೊಂದು ಟ್ರಾಕ್ಟ್ರಗಳು ಸಂಪೂರ್ಣ ಸುಟ್ಟು ಹೋಗಿವೆ ಎನ್ನಲಾಗಿದೆ.

ದಾರಿಮಧ್ಯೆ ಟ್ರಾಕ್ಟ್ರಗಳಿಗೆ ಬೆಂಕಿ :
ಮುಧೋಳದಲ್ಲಿ ಹೋರಾಟ ನಿರತ ರೈತರು ಸಮೀರವಾಡಿಗೆ ಆಗಮಿಸುವ ವೇಳೆ ರನ್ನಬೆಳಗಲಿ ಪಟ್ಟಣದ ವ್ಯಾಪ್ತಿಯಲ್ಲಿ ಒಂದು ಹಾಗೂ ಮಹಾಲಿಂಗಪುರ ಪಟ್ಟಣದ ಸಂಗಾನಟ್ಟಿ ಕ್ರಾಸ್ ಬಳಿ ಕಬ್ಬು ತುಂಬಿದ ಟ್ರಾಲಿಗಳನ್ನು ಪಲ್ಟಿಮಾಡಿ, ಬೆಂಕಿ ಹಚ್ಚಿ ರೈತರು ಆಕ್ರೋಶವ್ಯಕ್ತಪಡಿಸಿದ್ದಾರೆ.
3300 ದರ ಒಪ್ಪದ ಬಾಗಲಕೋಟೆ ಜಿಲ್ಲೆಯ ರೈತರು :
ಗುರ್ಲಾಪೂರದಲ್ಲಿ ನಡೆದ ಹೋರಾಟದಲ್ಲಿ ಕಾರ್ಖಾನೆಯವರು 3250 ಹಾಗೂ ಸರ್ಕಾರದ ಸಹಾಯಧನ 50 ಸೇರಿ 3300 ದರಕ್ಕೆ ರಾಜ್ಯದ ಎಲ್ಲಾ ರೈತರು ಒಪ್ಪಿಗೆ ಸೂಚಿಸಿದ್ದರು. ಆದರೆ ಬಾಗಲಕೋಟೆ ಜಿಲ್ಲೆಯ ರೈತರು ಮಾತ್ರ ನಮಗೆ 3500 ದರ ಬೇಕೆಂದು ಮುಧೋಳದಲ್ಲಿ ಹೋರಾಟ ಪ್ರಾರಂಭಿಸಿದ್ದರು. ಆದರೆ ಗುರುವಾರ ಸಮೀರವಾಡಿ ಕಾರ್ಖಾನೆಯವರು ಸರ್ಕಾರದ ಆದೇಶದಂತೆ 3300 ರೂಪಾಯಿ ಕೊಡಲು ಒಪ್ಪಿ ದರ ಘೋಷಿಸಿ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಿದ್ದರು. ಜಿಲ್ಲೆಯ ರೈತರ ಹೋರಾಟ ನಡೆಯುತ್ತಿರುವಾಗ ಕಾರ್ಖಾನೆ ಪ್ರಾರಂಭಿಸಿದ್ದು ಹಾಗೂ ಹೋರಾಟನಿರತ ಮುಧೋಳ ರೈತರು ಮತ್ತು ಕಾರ್ಖಾನೆಪರ ರೈತರ ನಡುವಿನ ಮಾತಿನ ಚಕಮಕಿಯೇ ವಿಕೋಪಕ್ಕೆ ತೆರಳಿ, ಕಲ್ಲು ತೂರಾಟ, ಹಲವರಿಗೆ ಗಾಯ, ನೂರಾರು ಟ್ಯಾಕ್ಟರ್‌ಗಳಿಗೆ ಬೆಂಕಿ ಬೀಳಲು ಕಾರಣವಾಗಿದೆ ಎನ್ನಲಾಗುತ್ತಿದೆ. ನಿಖರ ಕಾರಣ ಪೊಲೀಸ್‌ರ ತನಿಖೆಯಿಂದ ತಿಳಿಯಬೇಕಾಗಿದೆ.

 

ನ.26ರವರೆಗೆ ನಿಷೇಧಾಜ್ಞೆ ಜಾರಿ:
ಗುರುವಾರ ಸಂಜೆ ಸಮೀರವಾಡಿಯಲ್ಲಿ ಜರುಗಿದ ರೈತರ ಸಂಘರ್ಷದಿಂದ ಕಬ್ಬಿದ ದರ ಹೋರಾಟವು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಎಂ.ಸಂಗಪ್ಪ ಅವರು ನ.13ರ ಗುರುವಾರ ರಾತ್ರಿ 8ರಿಂದ ನ.16 ರವಿವಾರ ಮುಂಜಾನೆ 8 ಗಂಟೆವರೆಗೆ ಜಮಖಂಡಿ, ಮುಧೋಳ, ರಬಕವಿ-ಬನಹಟ್ಟಿ ಸೇರಿ ಮೂರು ತಾಲೂಕಿನಾದ್ಯಂತ ಸೆಕ್ಷನ್ 163 ಅಡಿಯಲ್ಲಿ ಯಾವುದೇ ಪ್ರತಿಭಟನೆ, ಮುಷ್ಕರ ಹಾಗೂ ಗುಂಪು ಸೇರುವದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.