ಸುದ್ಧಿಕನ್ನಡ ವಾರ್ತೆ
ಪಣಜಿ: ಕರ್ನಾಟಕದಿಂದ ಗೋವಾಕ್ಕೆ ಬಂದ ಕನ್ನಡಿಗರು RGP ಪಕ್ಷದ ಮನೋಜ ಪರಬ್ ಹೇಳಿಕೆ ನೀಡಿದ ಕೂಡಲೆ ನಾವು ಕರ್ನಾಟಕಕ್ಕೆ ವಾಪಸ್ಸು ಹೋಗಬೇಕೆ..?ಇಲ್ಲಿಯವರಿಗೆ ಬೇಕು ಎಂದಾಗ ಬರಲು ಬೇಡ ಎಂದಾಗ ಹೋಗಲು ಸಾಧ್ಯವಿಲ್ಲ. ಸಂವಿಧಾನ ಏನು ಹೇಳುತ್ತದೆ..? ಪೋರ್ಚುಗೀಸರ ಆಳ್ವಿಕೆಯ ಸಂದರ್ಭದಲ್ಲಿ ಗೋವಾದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕರ್ನಾಟಕದಿಂದ ಕನ್ನಡಿಗರನ್ನು ಹುಡುಕಿ ಹುಡುಕಿ ಕರೆತಂದಿದ್ದಾರೆ. ಗೋವಾದ ಅಭಿವೃದ್ಧಿಯಲ್ಲಿ ಕನ್ನಡಿಗರ ಮಾತ್ರ ಬಹುಮುಖ್ಯವಾಗಿದೆ. ಇದರಿಂದಾಗಿ ನಮಗೆ ಘಾಟಿ ಎಂದು ಕರೆದರೆ ಅದನ್ನು ಸಹಿಸಿ ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ (Siddanna Meti) ನುಡಿದರು.
ಗೋವಾದ ಚಾನಲ್ ವೊಂದಕ್ಕೆ ನೀಡಿದ ಲೈವ್ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು. 1984 ರಲ್ಲಿ ಗೋವಾದ ವಾದ್ಕೊದಲ್ಲಿ ಮಾರಾಮಾರಿಯಾದಾಗ ಕನ್ನಡಿಗರು ತಮ್ಮ ಊರಿಗೆ ವಾಪಸ್ಸು ತೆರಳಿದ್ದರು. ಆಗ ಅಲ್ಲಿ ಮೀನು ಮಾರುಕಟ್ಟೆಯನ್ನೂ ಸ್ವಚ್ಛ ಮಾಡುವವರು ಯಾರೂ ಇರಲಿಲ್ಲ. ಎಲ್ಲ ಗಬ್ಬು ನಾರುತ್ತಿತ್ತು. ಆಗ ಕೂಡ ಕನ್ನಡಿಗರನ್ನು ಕೈಕಾಲುಬಿದ್ದು ಕೆಲಸಕ್ಕೆ ಗೋವಾಕ್ಕೆ ಕರೆತಂದರು. ಕನ್ನಡಿಗರು ಇವರಿಗೆ ಬೇಡವಾದಾಗ ವಾಪಸ್ಸು ಹೋಗಬೇಕೆ ಎಂದು ಪ್ರಶ್ನಿಸಿದ ಸಿದ್ಧಣ್ಣ ಮೇಟಿ, RGP ಪಕ್ಷ ಹುಟ್ಟುಹಾಕಿದಾಗ ಮನೋಜ್ ಪರಬ್ ತಮ್ಮ ಸ್ವಂತ ಬಲದಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಕನ್ನಡಿಗರನ್ನು ಬಳಸಿಕೊಂಡು ಕನ್ನಡಿಗರನ್ನು ಘಾಟಿ ಘಾಟಿ (Ghati Ghati) ಎಂದು ಕರೆಯುತ್ತ ಸ್ಥಳೀಯರ ಮತ ಪಡೆಯಲು ಪ್ರಯತ್ನಿಸಿದರು. ಕನ್ನಡಿಗರ ಬಗ್ಗೆ ಗೋವಾದ ಜನರಿಗೆ ದ್ವೇಷದ ಭಾವನೆ ಹುಟ್ಟಿಸಿ ಮತ ಪಡೆಯಲು ಅವರು ಯತ್ನಿಸಿದರು. ಗೋವಾದಲ್ಲಿ ಕನ್ನಡಿಗರು ಪಂಚಾಯತ ಅಧ್ಯಕ್ಷರಾಗಲು ಗೋವಾದ ಜನರ ಬೆಂಬಲವೂ ಕೂಡ ಇದೆ. ಪಂಚಾಯತ ಅಧ್ಯಕ್ಷರಾಗಲು ಇತರ ಚುನಾಯಿತರ ಮತ ಬೇಕೇ ಬೇಕು. ಗೋವಾದಲ್ಲಿ RGP ಪಕ್ಷ ಜಗಳ ಹಚ್ಚುತ್ತಿದೆ ಎಂದು ಸಿದ್ಧಣ್ಣ ಮೇಟಿ ನುಡಿದರು.
ಗೋವಾದಲ್ಲಿ ಯಾವುದೇ ಮತ ಕ್ಷೇತ್ರದಲ್ಲಿ ಜನರ ಒತ್ತಾಯದ ಮೇರೆಗೆ ಕನ್ನಡಿಗರು ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿ ಆಯ್ಕೆಯಾದರೆ ಅದು ಜನರ ನಿರ್ಧಾರ. ಇದಕ್ಕೆ ಯಾರೂ ಏನೂ ಹೇಳಲು ಸಾಧ್ಯವಿಲ್ಲ. ಮಹದಾಯಿ (Mahadayi) ನದಿ ನೀರು ಹಂಚಿಕೆ ವಿಷಯವನ್ನು ಕರ್ನಾಟಕ ಹಾಗೂ ಗೋವಾ ಎರಡೂ ರಾಜ್ಯಗಳು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ನಾನು ಹೇಳಿದ ಮಾತ್ರಕ್ಕೆ ನದಿ ನೀರು ಗೋವಾಕ್ಕೆ ಬರುವುದಿಲ್ಲ, ಮನೋಜ್ ಪರಬ್ ಹೇಳಿದ ಮಾತ್ರಕ್ಕೆ ಮಹದಾಯಿ ನೀರು ಕರ್ನಾಟಕಕ್ಕೆ ಹೋಗುವುದಿಲ್ಲ. ಸದ್ಯ ಈ ವಿಷಯ ನ್ಯಾಯಾಲಯದಲ್ಲಿದೆ. ಮನೋಜ್ ಪರಬ್ (Manoj Parab) ಕೇವಲ ಕನ್ನಡಿಗರನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿದ್ಧಣ್ಣ ಮೇಟಿ ನುಡಿದರು.
ಗೋವಾ ಸರ್ಕಾರ ಹೇಳುವಂತೆ 53 ವರ್ಷ ಗೋವಾದಲ್ಲಿಯೇ ಇದ್ದವರು ಗೋವಾ ರಾಜ್ಯದ ಜನರೇ ಆಗುತ್ತಾರೆ. ಹಾಗಿದ್ದರೆ ನಾನು 1973 ಯಲ್ಲಿ ಜನಿಸಿದ್ದೇನೆ. ಕನ್ನಡಿಗರು ಗೋವಾಕ್ಕೆ ಬಂದು ಜನರು ಜಮೀನನ್ನು ಅತಿಕ್ರಮಣ ಮಾಡಿಕೊಂಡಿಲ್ಲ. ಗೋವಾಕ್ಕೆ ಬಂದು ದೆಹಲಿ ಮತ್ತು ಇನ್ನಿತರ ಕಡೆಗಳಿಂದ ದೊಡ್ಡ ದೊಡ್ಡ ಬಿಲ್ಡರ್ ಗಳು ಬಂದು ಜಾಗ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಂತವರನ್ನು ಹಿಡಿದುಕೊಳ್ಳುವುದನ್ನು ಬಿಟ್ಟು ಗೋವಾದಲ್ಲಿರುವ ಬಡ ಕನ್ನಡಿಗರನ್ನು ಹಿಡಿದುಕೊಂಡು ಅವರ ಮನೆ ತೆರವುಗೊಳಿಸುತ್ತಿದ್ದಾರೆ. 2004 ರಲ್ಲಿ ಅಂದಿನ ಮುಖ್ಯಮಂತ್ರಿ ಮನೋಹರ್ ಪರೀಕರ್ ರವರಿಗೂ ನಾನು ಹೇಳಿದ್ದೆ, ಗೋವಾ ವಾಸ್ಕೊದಲ್ಲಿರುವ ಕನ್ನಡಿಗರ ಮನೆಗಳನ್ನು ತೆರವುಗೊಳಿಸುವುದಾದರೆ ತೆರವುಗೊಳಿಸಿ, ಆದರೆ ಅವರಿಗೆ ಮೊದಲು ಪುನರ್ವಸತಿ ಕಲ್ಪಿಸಿ ಎಂದು ಹೇಳಿದ್ದೆ. ಆದರೆ ಯಾವುದೇ ಪುನರ್ವಸತಿ ಕಲ್ಪಿಸದೆಯೇ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿದರು. ಕರ್ನಾಟಕದಿಂದ ಕೂಲಿ ಕಾರ್ಮಿಕರು ಗೋವಾಕ್ಕೆ ಬಂದಾಗ ಇಲ್ಲಿನ ಯಾರಾದರೂ ಶಾಸಕರು ಅಥವಾ ಮುಖಂಡರು ಎಲ್ಲಿ ಹೇಳುತ್ತಾರೆಯೋ ಅಲ್ಲಿ ಕನ್ನಡಿಗರು ಜೋಪಡಿ ಹಾಕಿಕೊಳ್ಳುತ್ತಾರೆ. ನಂತರ ಸ್ಥಳೀಯ ಶಾಸಕರು ವೋಟ್ ಬ್ಯಾಂಕ್ ಗಾಗಿ ಈ ಕನ್ನಡಿಗರ ಕುಟುಂಬಗಳಿಗೆ ವೋಟರ್ ಐಡಿ, ರೇಷನ್ ಕಾರ್ಡ, ಮನೆಗೆ ವಿದ್ಯುತ್ ಸಂಪರ್ಕ , ನೀರು ಎಲ್ಲ ಸೌಲಭ್ಯ ನೀಡುತ್ತಾರೆ. ಹೀಗೆ ಲೀಗಲ್ ಆಗಿ ಎಲ್ಲ ಸೌಲಭ್ಯ ನೀಡಿದ ನಂತರ 25 ವರ್ಷ ಕಳೆದ ನಂತರ ಕನ್ನಡಿಗರ ಮನೆಗಳನ್ನು ಇದ್ದಕ್ಕಿದ್ದಂತೆಯೇ ತೆರವುಗೊಳಿಸುವುದು ತಪ್ಪಲ್ಲವೇ…? ಇವರಿಗೆ ಮುಂಚೆಯೇ ಗೊತ್ತಿರಲಿಲ್ಲವೇ..? ಎಂದು ಸಿದ್ಧಣ್ಣ ಮೇಟಿ ಪ್ರಶ್ನಿಸಿದರು.
ಗೋವಾ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮಾಜೆ ಘರ್ ಯೋಜನೆ ಗೋವಾದಲ್ಲಿರುವ ಕನ್ನಡಿಗರಿಗೆ ಸಿಗುವುದಿಲ್ಲ. ಕಾರಣವೆಂದರೆ ಕನ್ನಡಿಗರ ಅನಧೀಕೃತ ಮನೆಗಳನ್ನು ಅಧೀಕೃತಗೊಳಿಸಲು ಇವರ ಬಳಿ ಕೇವಲ ಕರೆಂಟ್ ಬಿಲ್ ಮತ್ತು ನೀರಿನ ಬಿಲ್ ಇದ್ದರೆ ಸಾಕಾಗುವುದಿಲ್ಲ ಎಂದು ಸಿದ್ಧಣ್ಣ ಮೇಟಿ ನುಡಿದರು. ಕೇಂದ್ರ ಸರ್ಕಾರದ ಹಲವು ಯೋಜನೆಗಳಿವೆ ಇಂತಹ ಯೋಜನೆಗಳನ್ನು ಪಡೆದು ಗೃಹ ನಿರ್ಮಾಣ ಸಾಧ್ಯ ಎಂದು ಸಿದ್ಧಣ್ಣ ಮೇಟಿ ನುಡಿದರು.
