ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ನಡುವೆ ನಡೆದ ಜಗಳದಲ್ಲಿ ಮಗನೇ ತನ್ನ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ (Yellapur)ತಾಲೂಕಿನ ಮಾವಿನಕಟ್ಟಾ ಬಳಿ ಭಾನುವಾರ ಸಂಭವಿಸಿದೆ.

ಪುತ್ರ ಹರೀಷ ಮರಾಠಿ (29) ಹಾಗೂ ತಂದೆ ನಾರಾಯಣ ಪರಶು ಮರಾಠಿ (51) ಇವರಿಬ್ಬರ ನಡುವೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಪುತ್ರ ಹರೀಷ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮಾವಿನಕಟ್ಟಾ ಗ್ರಾಮದಲ್ಲಿ ನಾರಾಯಣ ಮರಾಠಿಯು ತನ್ನ ಮಕ್ಕಳಾದ ಹರೀಶ ಹಾಗೂ ತಾರಾ ರವರೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಹರೀಶ ಮತ್ತು ತಾರಾ ನಡುವೆ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ.

ಭಾನುವಾರ ನಡೆದ ಜಗಳ ವಿಕೋಪಕ್ಕೆ ತಲುಪಿದೆ. ತಂದೆ ನಾರಾಯಣ ಮರಾಠಿ ಮನೆಗೆ ಬಂದಾಗ ಮಗಳು ತಾರಾ ಇವಳು ಅಣ್ಣ ತನಗೆ ಹೊಡೆದ ವಿಚಾರವನ್ನು ತಂದೆಯ ಬಳಿ ಹೇಳಿಕೊಂಡಿದ್ದಾಳೆ. ಇದರಿಂದ ಸಿಟ್ಟಾದ ತಂದೆ ಪೋಲಿಸ್ ದೂರು ಕೊಡುತ್ತೇನೆ ಎಂದು ಹೋಗುತ್ತಿದ್ದಾಗ ಮಗ ಹರೀಶ ತಂದೆಯನ್ನು ಕೊಡಲಿಯಿಂದ ಹೊಡೆದಿದ್ದಾನೆ. ಈ ಹಲ್ಲೆಯಿಂದ ತಂದೆ ನಾರಾಯಣ ಮರಾಠಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೂಡಲೇ ನಾರಾಯಣ ಮರಾಋಇಯನ್ನು ಯಲ್ಲಾಪುರ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಅಷ್ಟರಲ್ಲೇ ಸಾವನ್ನಪ್ಪಿದ್ದ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಹರೀಶ್ ಮರಾಠಿಯ ಬಂಧನಕ್ಕೆ ಪೋಲಿಸರು ಶೋಧ ಕಾರ್ಯ ಕೈಗೊಂಡಿದ್ದಾರೆ.