ಸುದ್ದಿ ಕನ್ನಡ ವಾರ್ತೆ
ಮುಧೋಳ : ನಗರದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಧ್ಯಸ್ಥಿಕೆಯಲ್ಲಿ ನಡೆದ ರೈತ ಮುಖಂಡರ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ಸರಣಿ ಸಂಧಾನ ಸಭೆಗಳು ವಿಫಲಗೊಂಡಿದ್ದು, ರೈತರ ಹೋರಾಟ‌‌ ಮತ್ತೊಂದು‌ ಮಜಲಿಗೆ ಹೊರಳಿದೆ.

ಮಧ್ಯಾಹ್ನ ಸಚಿವರು ಹಾಗೂ ರೈತರೊಂದಿಗೆ ನಡೆದ ಸಭೆಯಲ್ಲಿ ಎಪ್.ಆರ್.ಪಿ ಮೋಸದಿಂದ ಕೂಡಿದೆ, ರಿಕವರಿ ಹಾಗೂ ತೂಕದಲ್ಲಿ ಕೆಲ ಸಕ್ಕರೆ ಕಾರ್ಖಾನೆಗಳು ಮೋಸ ಮಾಡುತ್ತಿವೆ. ಆದ್ದರಿಂದ ರಿಕವರಿ ಬಿಟ್ಟು ಬಿಲ್ ಕೊಡಬೇಕೆಂದು ತಿಳಿಸಿದರು.

ಅವೆರಿಗೆ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪುರ, ಕಬ್ಬಿನ ಉಳಿದ ಸಮಸ್ಯೆಗಳ ಬಗ್ಗೆ ಮುಂದಿನ ದಿನದಲ್ಲಿ ಸಭೆ ಮಾಡಿ ಪರಿಹಾರ ಕಂಡುಕೊಳ್ಳೋಣ. ಸದ್ಯ ಮುಖ್ಯಮಂತ್ರಿಗಳು ಆದೇಶಕ್ಕೆ ಬೆಲೆಕೊಟ್ಟು ಹೋರಾಟ ಹಿಂಪಡೆಯಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ಮಾತನಾಡಿದ ರೈತ ಮುಖಂಡರು, ಎಪ್.ಆರ್.ಪಿ ಹಾಗೂ ಎಸ್.ಎ.ಪಿ ಕಾನೂನು ಸತ್ತು ಹೋಗಿವೆ. ರಿಕವರಿ ಆಧಾರಿತ ಬಿಲ್ ಬೇಡ ಅದನ್ನು ಬಿಟ್ಟು ಹಣ ಕೊಡಿ ಎಂದು ಪಟ್ಟು ಹಿಡಿದರು.
ಅದರೊಂದಿಗೆ 2024-25 ನೇ ಸಾಲಿನ ಹೆಚ್ಚುವರಿ ಹಣ ಕೊಡಿಸಿ ಎಂದು ಬೇಡಿಕೆ ಇಟ್ಟರು.
ಈ ಹಂತದಲ್ಲಿ ಮಾತನಾಡಿದ ಸಚಿವರು, ಈ ಬಗ್ಗೆ ಕಾರ್ಖಾನೆಯವರೊಂದಿಗೆ ಚರ್ಚಿಸಿ ತಿಳಿಸುವುದಾಗಿ‌ ಸಮಯಾವಕಾಶ ಕೇಳಿದರು.

ಬಳಿಕ ಕೆಲ ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು. ಸಭೆಯಲ್ಲಿ ಕಾರ್ಖಾನೆಯವರು ನಾವು ಸರ್ಕಾರದ ಆದೇಶವನ್ನು ಪಾಲಿಸುತ್ತೆವೆ. ಹೆಚ್ಚಿನ ಹಣ ನೀಡಲು ಆಗುವುದಿಲ್ಲ ಎಂದು ತಿಳಿಸಿದರು.
ಬಳಿಕ ಮತ್ತೊಂದು ಸುತ್ತಿನ ರೈತರೊಂದಿಗೆ ಸಚಿವರು ಸಭೆ ನಡೆಸಿ ಕಾರ್ಖಾನೆಗಳ ನಿರ್ಧಾರವನ್ನು ರೈತರ ಗಮನಕ್ಕೆ ತಂದರು. ಇದರಿಂದ ತೃಪ್ತರಾಗದ ರೈತರು‌ ಸಭೆಯಿಂದ ಹೊರನಡೆದರು.
ಸಭೆಯಲ್ಲಿ ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ, ಈರಪ್ಪ ಹಂಚಿನಾಳ, ಸುರೇಶ ಚಿಂಚಲಿ, ಸುಭಾಷ ಶಿರಬೂರ, ಮುತ್ತಪ್ಪ‌ ಕೋಮಾರ, ಜಿಲ್ಲಾಧಿಕಾರಿ‌ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಆಹಾರ ಇಲಾಖೆ ಅಧಿಕಾರಿ‌ ಶ್ರೀಶೈಲ‌ ಕಂಕಣವಾಡಿ ಸೇರಿದಂತೆ ಇತರರು ಇದ್ದರು.