ಸುದ್ದಿ ಕನ್ನಡ ವಾರ್ತೆ
. ದಾಂಡೇಲಿ:ನಗರದ ಜೆ.ಎನ್ ರಸ್ತೆಯಲ್ಲಿರುವ ಶ್ರೀ ಮಾರುತಿ ಮಂದಿರದ ಮುಂಭಾಗದಲ್ಲಿ ಮಂಗಳವಾರ ಆಗಮಿಸಿದ ಪರ್ತಗಾಳಿ ಜಿವೋತ್ತಮ ಮಠದ ಶ್ರೀರಾಮ ದಿಗ್ವಿಜಯ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠವು ಸ್ಥಾಪನೆಯಾಗಿ 550 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸಂಸ್ಥಾನದ ಆರಾಧ್ಯ ದೇವರಾದ ಶ್ರೀರಾಮ ದೇವರ 77 ಅಡಿ ಎತ್ತರದ ಕಂಚಿನ ಪ್ರತಿಮೆ ಪರ್ತಗಾಳಿಯಲ್ಲಿ ಅನಾವರಣಗೊಳ್ಳಲಿದೆ.
ಈ ಹಿನ್ನಲೆಯಲ್ಲಿ ಬದರಿಕಾಶ್ರಮದಿಂದ ಹೊರಟ ಪರ್ತಗಾಳಿ ಜಿವೋತ್ತಮ ಮಠದ ಶ್ರೀರಾಮ ದಿಗ್ವಿಜಯ ರಥವು ಹಲವು ರಾಜ್ಯಗಳನ್ನು ಸಂಚರಿಸಿ,ಮಂಗಳವಾರ ದಾಂಡೇಲಿಗೆ ಆಗಮಿಸಿದ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು. ಜೆ.ಎನ್ ರಸ್ತೆಯ ಶ್ರೀ ಮಾರುತಿ ಮಂದಿರದ ಮುಂಭಾಗದಿಂದ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದವರೆಗೆ ಭವ್ಯ ಮೆರವಣಿಗೆಯ ಮೂಲಕ ಶ್ರೀರಾಮ ದಿಗ್ವಿಜಯ ರಥಯಾತ್ರೆಯನ್ನು ಕರೆತರಲಾಯಿತು.
ಈ ಸಂದರ್ಭದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಮತ್ತು ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
