ಸುದ್ದಿ ಕನ್ನಡ ವಾರ್ತೆ
ಅಂಕೋಲಾ:ತಾಲೂಕಿನ ಕಳೆದ ಹಲವು ವರ್ಷಗಳಿಂದ ಹುಟ್ಟಿಕೊಂಡ ‘ ಸಮರ್ಪಣಾ ‘ ವಿಶ್ರಾಂತ ಶಿಕ್ಷಕರ ಬಳಗವು ತನ್ನದೇ ಆದ ಜನಪರ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು, ಬುಧವಾರ ಸೆಕೆಂಡರಿ ಹೈಸ್ಕೂಲ್ ಭಾವಿಕೇರಿಯಲ್ಲಿ ಸೇವೆಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿರುವ ಎಸ್.ಜಿ.ಜೋಶಿ ಸರ್ ಹಾಗೂ ಲಲಿತಾ ತಿಗಡಿ ಗುರುಮಾತೆ ಇವರನ್ನು ಸಮರ್ಪಣ ಬಳಗ ಮತ್ತು ಅವರ ಶಿಷ್ಯವೃಂದ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಅಂಕೋಲಾದ ನೌಕರರ ಭವನದಲ್ಲಿ ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಹಾಜರಿದ್ದ ಸರ್ವರನ್ನು ಎಸ್.ಆರ್.ನಾಯಕ ನಿವೃತ್ತ ಉಪನ್ಯಾಸಕರು ಇವರ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮರ್ಪಣ ಬಳಗದ ಉದ್ದೇಶ ಮತ್ತು ನಡೆಸುತ್ತಿರುವ ಕಾರ್ಯಕ್ರಮದ ಕುರಿತು ನಿವೃತ್ತ ಶಿಕ್ಷಕರಾದ ದೇವರಾಯ ನಾಯಕ ಪ್ರಾಸ್ತಾವಿಕವಾಗಿ ಮಾತಾಡಿದರು.
ಅಸಂಖ್ಯಾತ ವಿಧ್ಯಾರ್ಥಿಗಳ ಬಾಳಿಗೆ ಶಿಕ್ಷಣದ ಬೀಜ ಬಿತ್ತಿ, ಬಾಳಿಗೆ ಬೆಳಕಾದ ಹಿರಿಯ ನಿವೃತ್ತ ಶಿಕ್ಷಕರಾದ ಎಸ್ ಜಿ.ಜೋಶಿ ಹಾಗೂ ಲಲಿತಾ ತಿಗಡಿ ಇವರನ್ನು ಸಮರ್ಪಣ ಬಳಗ ಮತ್ತು ಅವರ ಶಿಷ್ಯ ವೃಂದ ಸನ್ಮಾನಿಸಿ ಗೌರವಿಸಿ ಆಶೀರ್ವಾದ ಪಡೆಯಿತು.

ಸನ್ಮಾನಿತರ ಪರವಾಗಿ ಅವರ ಶಿಷ್ಯ ಬಳಗದ ಪ್ರಮುಖರಾದ ಜಿ. ಟಿ. ನಾಯಕ ನಿವೃತ್ತ ಶಿಕ್ಷಕರು, ಹೊನ್ನಪ್ಪ ನಾಯಕ, ದೇವಾನಂದ ನಾಯಕ, ಎನ್. ಬಿ.ನಾಯ್ಕ, ಪಾಂಡುರಂಗ ಶೇಟ್,ಮುಂತಾದ ಶಿಷ್ಯ ವೃಂದ ತಮ್ಮ ಬಾಳಿಗೆ ದಾರಿ ದೀಪವಾದ ಗುರು ಮತ್ತು ಗುರುಮಾತೆಯ ಬಗ್ಗೆ ಹೆಮ್ಮೆಯಿಂದ ಮಾತಾಡಿ ಪಾದಕಮಲಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಸಂತಸ ಪಟ್ಟರು.
ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಸೇವೆಯನ್ನು ನೆನೆದು ತಮ್ಮನ್ನು ಕರೆದು ಸನ್ಮಾನಿಸಿ ಗೌರವಿಸಿದ ಶಿಷ್ಯ ಬಳಗದ ಕಾರ್ಯಕ್ಕೆ ಎಸ್.ಜಿ.ಜೋಶಿ ಮತ್ತು ಲಲಿತಾ ತಿಗಡಿ ಗುರುಮಾತೆಯರು ತಮ್ಮ ಮನದಾಳದ ಸಂತಸವನ್ನು ಶಿಷ್ಯ ಬಳಗದ ಜೊತೆ ಹಂಚಿಕೊಂಡು, ಎಲ್ಲರ ಬಾಳು ಬಂಗಾರವಾಗಲೆಂದು ಆಶೀರ್ವದಿಸಿದರು. ಸಮರ್ಪಣ ಬಳಗದ ರಮೇಶ ನಾಯಕರು ಹಿರಿಯ ಗುರು ಮತ್ತು ಗುರುಮಾತೆಯರು ಅಂದು ನೀಡಿದ ಶಿಕ್ಷಣ ನೆನೆದು ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು ಎಂದು ಸಂತಸ ಹಂಚಿಕೊಂಡರು. ಅಚ್ಚುತ ನಾಯಕ ಕಾರ್ಯಕ್ರಮ ನಿರೂಪಿಸಿದರೆ,ನಾಗೇಶ ನಾಯಕ ವಂದಿಸಿದರು.