ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ರಾಮನಗರ ಹಾಗೂ ಜೋಯಿಡಾ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಹಬ್ಬದ ಸಂಭ್ರಮ ಅದ್ದೂರಿಯಾಗಿ ಸಂಪನ್ನಗೊಂಡಿತು.

ದೀಪಾವಳಿಯ ಹಬ್ಬದ ನರಕ ಚತುರ್ದಶಿ ಸಂದರ್ಭದಲ್ಲಿ ನರಕಾಸುರನ ಆಕ್ರತಿಯನ್ನು ಮಾಡಿ, ಮೆರವಣಿಗೆಯ ಮೂಲಕ ನಸುಕಿನ ಜಾವ ಸುಡುವ ಮೂಲಕ, ಅಭ್ಯಂಗ ಸ್ನಾನ ಮಾಡಿ,ಹೊಸ ಬಟ್ಟೆ ತೊಟ್ಟು ಅವಲಕ್ಕಿ ಹಾಗೂ ಇನ್ನಿತರ ಸಿಹಿ ತಿಂಡಿಗಳನ್ನು ಪರಸ್ಪರ ಮನೆಗಳಿಗೆ ಹೋಗಿ ತಿಂದರು. ಮನೆ,ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ,ಅಮಾವಾಸ್ಯೆಯ ಪೂಜೆ,ಗೋ ಪೂಜೆ,ಸಹೋದರ ಪೂಜೆ ತಮ್ಮ ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಹಬ್ಬವನ್ನು ಆಚರಿಸಿದರು. ಗೋ ಪೂಜೆಯ ದಿನ ಕೊಟ್ಟಿಗೆ,ಗೋವನ್ನು ಹೂವುಗಳಿಂದ ಶೃಂಗರಿಸಿ,ಹೊಸ ಹಗ್ಗ, ಕೊರಳಿಗೆ ಅವಲಕ್ಕಿ,ತಿಂಡಿತಿನಿಸಿನ,ತೆಂಗಿನ ಕಾಯಿ ಇರುವ ಪೊಟ್ಟಣವನ್ನು ಕಟ್ಟಿ, ಗೋ ಮಾತೆಯನ್ನು ಭಕ್ತಿಯಿಂದ ಬೇಡಿಕೊಂಡರು. ದೀಪಾವಳಿಯ ಹಬ್ಬದ ಐದು ದಿನ ಮೊದಲು ಗೋಮಾತೆಯ ಸಗಣಿ ಗೊಬ್ಬರದ ಮೇಲೆ ಗೊಂಡೆ ಹೂವಿನ ಅಲಂಕಾರ ಪ್ರತಿದಿನ ದೀಪಾವಳಿಯ ಪಾಡ್ಯದವರೆಗೆ ಮುಂದುವರೆಯಿತು. ದೀಪಾವಳಿಯ ಹಬ್ಬದ ನಿಮಿತ್ತ ತಾಲೂಕಿನ ಅನೇಕ ಕಡೆ,ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಪ್ರಯುಕ್ತ ನೃತ್ಯ,ಸಂಗೀತ ಕಾರ್ಯಕ್ರಮಗಳು ನಡೆದವು.ಅನೇಕ ಕಡೆ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಶ್ರೀಕೃಷ್ಣ ಮೂರ್ತಿಯ ಪೂಜನ, ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೊಂಕಣಿ,ಮರಾಠಿ ಭಾಷೆಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ದಾಂಡಿಯಾ ನೃತ್ಯ, ಆರತಿ, ಭಜನೆ,ಮರಾಠಿ ಖೇಳ,ಪೌರಾಣಿಕ ನಾಟಕಗಳ ಪ್ರದರ್ಶನ ಭಕ್ತರ ಮನರಂಜನೆಗಾಗಿ ನಡೆಯಿತು.

ಹಿಂಗಾರು ಮಳೆಯ ಆರ್ಭಟ ಹಬ್ಬದ ಸಮಯದಲ್ಲಿ ಎಲ್ಲರ ಉತ್ಸಾಹಕ್ಕೆ ತಣ್ಣೀರೆರೆಚಿತು. ಮನೆಯ ಮುಂದೆ ರಂಗೋಲಿಯ ಅಲಂಕಾರ,ಆಕಾಶ ಬುಟ್ಟಿ, ದೀಪಗಳ ಸಾಲು,ಸಾಲು, ಆಧುನಿಕ ವಿದ್ಯುತ್ ದೀಪಗಳ ಅಲಂಕಾರ ಒಟ್ಟಿನಲ್ಲಿ ಒಂದು ವಾರಗಳ ಕಾಲ ತಾಲೂಕಿನ ಎಲ್ಲ ಕಡೆ ದೀಪಾವಳಿಯ ಹಬ್ಬದ ಸಂಭ್ರಮದ ವಾತಾವರಣ ಕಂಡು ಬಂದಿತು.