ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ತಾಲೂಕಿನ ಮಳಲಗಾಂವ ಕ್ರಾಸ್ ನಿಂದ ಬರುವಾಗ ಚಂದಗುಳಿ ಮಾರ್ಗದ ಬಳಿ ಚಿರತೆಯ ದಾಳಿಯಿಂದ ಬೈಕ್ ಸವಾರರು ಗಾಯಗೊಂಡ ಘಟನೆ ನಡೆದಿದೆ. ಮಾಗೋಡಿನ ಬಕ್ಕಳತಗ್ಗಿನ ಗಣೇಶ ಸಿದ್ದಿ ಹಾಗೂ ದೇಸಾಯಿಮನೆಯ ಧನಂಜಯ ಸಿದ್ದಿ ಇಬ್ಬರೂ ಬೈಕ್ ಮೂಲಕ ಚಂದಗುಳಿ ಮಾರ್ಗವಾಗಿ ಮಂಗಳವಾರ ರಾತ್ರಿಯ ವೇಳೆ ಬರುವಾಗ,ಮರಿಗಳೊಂದಿಗೆ ಇದ್ದ ಚಿರತೆಯು ಏಕಾಏಕಿ ಇರ್ವರ ಮೇಲೆ ಎರಗಿದೆ.ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಧನಂಜಯ ಅವರ ಕಾಲಿಗೆ ಚಿರತೆಯ ಉಗುರು ತಗುಲಿ ಪರಚಿದ ಗಾಯಗಳಾಗಿವೆ. ಚಿರತೆ ದಾಳಿಯಿಂದ ಬೈಕ್ ನಿಯಂತ್ರಣ ತಪ್ಪಿ ಬೈಕ್ ಸವಾರರು ಬಿದ್ದಿದ್ದು,ಸಣ್ಣಪುಟ್ಟ ಗಾಯಗಳಾಗಿವೆ.ಬೈಕ್ ಬೀಳುತ್ತಿದ್ದಂತೆ ಚಿರತೆ ತನ್ನ ಮರಿಗಳೊಂದಿಗೆ ಅಲ್ಲಿಂದ ಹೋಗಿದ್ದು,ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಂದಗುಳಿ,ಮಳಲಗಾಂವ ಭಾಗದ ಗ್ರಾಮಸ್ಥರು ಚಿರತೆಯ ಓಡಾಟ,ದಾಳಿಯಿಂದ ಕಂಗಾಲಾಗಿದ್ದು,ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.