ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಮತ್ತೆ ಮಳೆ ಆರಂಭಗೊಂಡಿದೆ. ಕಳೆದೆ ಎರಡು ದಿನಗಳಿಂದ ರಾತ್ರಿ ಮಳೆ ಸುರಿಯುತ್ತಿದೆ. ಮಂಗಳವಾರವೂ ಕೂಡ ಸಂಜೆ ದೀಪಾವಳಿ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಧಾರಾಕಾರ ಮಳೆಯಾಗಿದೆ. ಗೋವಾದ ಬಿಚೋಲಿ ಭಾಗದಲ್ಲಿ ಚಂಡಮಾರುತದ ರೀತಿಯಲ್ಲಿ ಮಳೆಗಾಳಿಯಾಗಿದ್ದು ಹಲವೆಡೆ ಬೃಹತ್ ಮರಗಳು ಧರೆಗುರುಳಿದೆ.
ದೀಪಾವಳಿ ಅಮಾವಾಸ್ಯೆಯ ಸಂಜೆ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಗೋವಾದ ಬಿಚೋಲಿ ಭಾಗದಲ್ಲಿ ಸುರಿದ ಗಾಳಿ ಮಳೆಗೆ ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಕೆಲ ಗಂಟೆ ವ್ಯತ್ಯಯವುಂಟಾದ ಘಟನೆಯೂ ನಡೆದಿದೆ. ಬಿಚೋಲಿ ಭಾಗದಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ವಿದ್ಯುತ್ ಇಲಾಖೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿರುವುದಾಗಿ ವರದಿಯಾಗಿದೆ.
ಬಿಚೋಲಿ ತಾಲೂಕಿನ ಮಯೆಯ ಕೆಳಬಾಯವಾಡಾ, ಅರ್ಧವಾಡಾ, ಭಾಗದಲ್ಲಿ ಭಾರಿ ಗಾಳಿ ಮಳೆಗೆ ರಸ್ತೆಯ ಹತ್ತಕ್ಕೂ ಹೆಚ್ಚು ಮರಗಳು ರಸ್ತೆಯ ಮೇಲೆ ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಬಂದ್ ಆದ ಘಟನೆ ಕೂಡ ನಡೆದಿದೆ. ಕೆಳಬಾಯವಾಡಾದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ವ್ಯತ್ಯಯಗೊಂಡಿದೆ.
ಪ್ರತಿದಿನ ಸಂಜೆ ಮಳೆಯಾಗುತ್ತಿರುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ. ಸದ್ಯ ಭತ್ತದ ತೆನೆ ಕಟಾವಿಗೆ ಬಂದಿದ್ದು ಮಳೆಯಿಂದಾಗಿ ಭತ್ತದ ತೆನೆ ನೆಲ ಕಚ್ಚಿದೆ.
