ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಲೋಟ್ಲಿಯ ವಿಜಯ್ ಮೆರೈನ್ ಶಿಪ್ ಯಾರ್ಡ್‍ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳು ಪರಿಹಾರ ನೀಡಹದ ಹೊರತು ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ತಪಾಸಣೆಯಲ್ಲಿ ಯಾವುದೇ ಸುರಕ್ಷತಾ ಕಾರ್ಯವಿಧಾನ ಕಂಡುಬಂದಿಲ್ಲವಾದ್ದರಿಂದ ಕಂಪನಿಯು ಏಳು ದಿನಗಳಲ್ಲಿ ಆಡಿಟ್ ವರದಿಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

 

ಲೋಟ್ಲಿಯ ವಿಜಯ್ ಮೆರೈನ್ ಶಿಪ್‍ಬಿಲ್ಡಿಂಗ್ ಪ್ರಾಜೆಕ್ಟ್‍ನಲ್ಲಿ ಶುಕ್ರವಾರ ಸಂಜೆ ಹಡಗು ನಿರ್ಮಿಸುವ ಕೆಲಸ ನಡೆಯುತ್ತಿರುವಾಗ ಸ್ಫೋಟ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಇದರಲ್ಲಿ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ. ಅವರಲ್ಲಿ, ಸೆರ್ ಅಲಿ (21, ಪಶ್ಚಿಮ ಬಂಗಾಳ) ಮತ್ತು ವಿನೋದ್ ದಿವಾನ್ (42, ಛತ್ತೀಸ್‍ಗಢ) ತೀವ್ರ ಸುಟ್ಟಗಾಯಗಳಿಂದ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ನಂತರ ಗೋವಾ ಮೆಡಿಕಲ್ ಆಸ್ಪತ್ರೆ ಬಾಂಬೋಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ್ ಕುಮಾರ್ (25) ಘಟನೆಯ ಮರುದಿನ ನಿಧನರಾದರು. ಎಲ್ಲಾ ಕಾರ್ಮಿಕರು ಅಲಿಬಾಗ್ (ಉತ್ತರ ಪ್ರದೇಶ) ಮೂಲದವರಾಗಿದ್ದು, ಪ್ರಸ್ತುತ ವೆರ್ನಾದಲ್ಲಿ ವಾಸಿಸುತ್ತಿದ್ದರು. ಆರು ಕಾರ್ಮಿಕರು ಮುಚ್ಚಿದ ಟ್ಯಾಂಕ್‍ನಲ್ಲಿದ್ದರು ಮತ್ತು ಒಬ್ಬ ಕಾರ್ಮಿಕ ಟ್ಯಾಂಕ್ ಹೊರಗೆ ಇದ್ದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ. ಮೊಹಮ್ಮದ್ ಬಾಬುಲ್ (25), ಮನೀಶ್ ಚವಾಣ್ (26) ಮತ್ತು ಅಭಿಷೇಕ್ ಸಿಂಗ್ (25, ಎಲ್ಲರೂ ಉತ್ತರ ಪ್ರದೇಶದ ಅಲಿಬಾಗ್‍ನವರು) ಗೋಮೆಕೊದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಈ ಪ್ರಕರಣದಲ್ಲಿ, ಮೈನಾ-ಕುಡ್ತರಿ ಪೆÇಲೀಸರು ವಿಜಯ್ ಮೆರೈನ್ ವರ್ಕ್‍ಶಾಪ್‍ನ ಭದ್ರತಾ ಅಧಿಕಾರಿ ರಾಜು ಬೋರಾ (ಅಸ್ಸಾಂ ಮೂಲದವರು) ಅವರನ್ನು ಬಂಧಿಸಿದ್ದಾರೆ. ಈ ಮಧ್ಯೆ, ದಕ್ಷಿಣ ಗೋವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಮೆರೈನ್ ಶಿಪ್‍ಯಾರ್ಡ್‍ನ ಕೆಲಸ ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆ ಹಡಗು ಪರಿಶೀಲಿಸಿ ವರದಿ ಸಲ್ಲಿಸಲಿದೆ.

 

ಬೆಂಕಿಯಲ್ಲಿ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳು, ಕಂಪನಿಯ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಮತ್ತು ಅವರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಶವಗಳನ್ನು ಅವರ ಊರುಗಳಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆಯನ್ನು ಸ್ವೀಕರಿಸುವವರೆಗೆ ಶವಗಳನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.