ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ತುಂಬೆಬೀಡು ಗ್ರಾಮದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಆಯೋಜಿಸಿದ್ದ “ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಜನಜಾಗೃತಿ ಸಮಾವೇಶದಲ್ಲಿ
ಸೋಂದಾ ಸ್ವರ್ಣವಲ್ಲಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳು ವೃಕ್ಷಾರೋಪಣ ನೆರವೇರಿಸಿ,ಸಭೆಯ ಸಾನಿಧ್ಯ ವಹಿಸಿ ಬೇಡ್ತಿ ನದಿ ನೀರಿನ ಹರಿವನ್ನು ತಡೆಯುವುದರಿಂದ ಮತ್ತು ನದಿಯ ನೀರನ್ನು ಬೇರೆಡೆ ತಿರುಗಿಸುವುದರಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ.ಬೇಡ್ತಿ ,ವರದಾ ನದಿ ಜೋಡಣೆಗೆ ನಮ್ಮೆಲ್ಲರ ವಿರೋಧ ಇದೆ.ವಿರೋಧದ ಧ್ವನಿ ಇನ್ನಷ್ಟು ಗಟ್ಟಿಯಾಗಲಿ ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ನುಡಿದರು. ಬೇಡ್ತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ ಎಂಬ ಭಾವನೆ ಸರಿಯಲ್ಲ, ನದಿಯ ನೀರು ಇಲ್ಲಿಯೇ ಸದ್ಬಳಕೆ ಆಗಬೇಕು ಈ ಪ್ರದೇಶದ ಕುಡಿಯುವ ನೀರಿನ ಉದ್ದೇಶಕ್ಕೆ ಹಾಗೂ ಕೃಷಿಗೆ ಬೇಡ್ತಿ ನದಿಯ ನೀರು ಅಗತ್ಯತೆ ಇದೆ.ಬೇಡ್ತಿ ನದಿಯ ನೀರನ್ನು ಬೇರೆಡೆಗೆ ಕೊಂಡೊಯ್ದರೆ ಘಟ್ಟದ ಮೇಲಿನ ಪ್ರದೇಶದ ಕೃಷಿ ಭೂಮಿ ಹಾಗೂ ಘಟ್ಟದ ಕೆಳಗಿನ ಪ್ರದೇಶಗಳ ಕೃಷಿ ಭೂಮಿಗೆ ಹಾನಿಯಾಗುತ್ತದೆ. ಈ ಯೋಜನೆಯನ್ನು ವಿರೋಧಿಸಿ ಪಕ್ಷಾತೀತವಾಗಿ ಹೋರಾಟ ಆಗಬೇಕು.ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿಯೋಗದ ಮೂಲಕ ತೆರಳಿ ಈ ಯೋಜನೆಯನ್ನು ವಿರೋಧಿಸುವ ಕುರಿತು ಮನವಿ ಸಲ್ಲಿಸಬೇಕು.ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಭೇಟಿಯಾಗಿ ಈ ಯೋಜನೆ ದುಷ್ಪರಿಣಾಮಗಳನ್ನು ತಿಳಿಸಬೇಕು.ಯೋಜನೆಯನ್ನು ವಿರೋಧಿಸಿ ವೈಜ್ಞಾನಿಕ ಆಧಾರದಲ್ಲಿ ಹೋರಾಟ ವಾಗಬೇಕು.ಜನಾಂದೋಲನ ಸಂಘಟಿಸಬೇಕು.ಕಾನೂನು ಹೋರಾಟವನ್ನು ನಡೆಸಬೇಕು.ಹೀಗೆ ವ್ಯವಸ್ಥಿತವಾದ ಹೋರಾಟದ ಮೂಲಕ ಯೋಜನೆಯನ್ನು ಹಿಮ್ಮೆಟ್ಟಿಸಬೇಕು ಎಂದು ಶ್ರೀಗಳು ನುಡಿದರು.ಎತ್ತಿನ ಹೊಳೆ ಯೋಜನೆಯಿಂದ ಯಾವುದೇ ಪ್ರಯೋಜನ ಆಗದಿರುವ ನಿದರ್ಶನ ನಮ್ಮ ಕಣ್ಣ ಮುಂದೆ ಇರುವಾಗ ಮತ್ತೊಮ್ಮೆ ಇದೇ ರೀತಿಯ ಬೇಡ್ತಿ ವರದಾ ನದಿ ಜೋಡಣೆ ಯೋಜನೆಯ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕುವುದು ಸರಿಯಲ್ಲ ಎಂದರು. ಬೇಡ್ತಿ ವರದಾ ನದಿ ಜೋಡಣೆ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್)ಆಗಿದೆ ಎಂದು ಹೇಳಲಾಗುತ್ತಿದೆ.ಆದರೆ ಯೋಜನೆಯ ಡಿ.ಪಿ.ಆರ್ ಇನ್ನೂ ಆಗಿಲ್ಲ ಎಂಬ ವಿಷಯ ನಮ್ಮ ಗಮನಕ್ಕೆ ಬಂದಿದೆ.ಕೇವಲ ಬೇಡ್ತಿ,ವರದಾ ನದಿ ಜೋಡಣೆಗೆ ಮಾತ್ರವಲ್ಲ, ಅಘನಾಶಿನಿ,ವೇದಾವತಿ ನದಿ ಜೋಡಣೆ ಯೋಜನೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೂ ನಮ್ಮ ತೀವ್ರ ವಿರೋಧ ಇದೆ ಎಂದು ಶ್ರೀಗಳು ತಿಳಿಸಿದರು.ಮುಂದಿನ ದಿನಗಳಲ್ಲಿ ಈ ಬಗ್ಗೆ ವಿವಿದೆಡೆ ನಡೆಯಲಿರುವ ಹೋರಾಟಗಳಿಗೂ ಜನ ಬೆಂಬಲ ಸಿಗುವಂತಾಗಲಿ ಎಂದು ಶ್ರೀಗಳು ಆಶಿಸಿದರು.
ಈ ಮಹತ್ವದ ಸಮಾವೇಶದಲ್ಲಿ ಉತ್ತರಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಸರ ಹೋರಾಟಗಾರ ಮತ್ತು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರಾದ ಶ್ರೀ ಅನಂತ ಹೆಗಡೆ ಆಶೀಸರ ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಾಂತಾರಾಮ್ ಸಿದ್ದಿ ಸೇರಿದಂತೆ ಅನೇಕ ಪ್ರಮುಖ ಗಣ್ಯರು ಹಾಗೂ ಪರಿಸರ ಹೋರಾಟಗಾರರು ಉಪಸ್ಥಿತರಿದ್ದರು.
