ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಝಾರ್ಖಂಡ್ ನ ರಾಂಚಿಯಿಂದ ಗೋವಾಕ್ಕೆ 13 ಮಕ್ಕಳ ಕಳ್ಳಸಾಗಾಣೆ ಮಾಡುತ್ತಿದ್ದ ನಿಖರ ಮಾಹಿತಿಯ ಆಧಾರದ ಮೇಲೆ ರೈಲ್ವೆ ರಕ್ಷಣಾ ದಳದ ಪೋಲಿಸರು ರಾಂಚಿ ಬಳಿಯ ಮೂಚಿ ರೈಲ್ವೆ ನಿಲ್ದಾಣದಲ್ಲಿ ರಕ್ಷಿಸಿದ್ದಾರೆ. ಈ ಮಕ್ಕಳನ್ನು ಸೋಮವಾರ ಝಾರ್ಖಂಡ್ ನ ರಾಂಚಿಯಿಂದ ಗೋವಾಕ್ಕೆ ಕಳ್ಳ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಇವರನ್ನು ವಾಸ್ಕೊ-ಡ-ಗಾಮಾ ಎಕ್ಸಪ್ರೆಸ್ ರೈಲಿನಲ್ಲಿ ಗೋವಾಕ್ಕೆ ಕರೆತರಲಾಗುತ್ತಿತ್ತು.
ಗೋವಾಕ್ಕೆ ಮಕ್ಕಳನ್ನು ಕಳ್ಳಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಆರ್ ಪಿ ಎಫ್ ಪೋಲಿಸರು ಮೂಚಿ ರೈಲು ನಿಲ್ದಾಣದ ಬಳಿ ವಾಸ್ಕೊ-ಡ-ಗಾಮಾ ರೈಲಿನ ಭೋಗಿಯ ತಪಾಸಣೆ ನಡೆಸಿದರು. ಆಗ ಅಲ್ಲಿ ಮಕ್ಕಳು ಇರುವುದು ಕಂಡುಬಂತು. ಅಲ್ಲಿ ಪೋಲಿಸರು ಮಕ್ಕಳನ್ನು ಪ್ರಶ್ನಿಸಿದಾಗ ಅದಕ್ಕೆ ಅವರು ಸರಿಯಾಗಿ ಉತ್ತರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಈ ಎಲ್ಲ 13 ಮಕ್ಕಳನ್ನು ರಕ್ಷಿಸಿದ ಪೋಲಿಸರು ಇವರನ್ನು ಮಕ್ಕಳ ರಕ್ಷಣಾ ಘಟಕದಲ್ಲಿ ಇರಿಸಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಪೋಲಿಸರು ಮಕ್ಕಳನ್ನು ವಿಚಾರಿಸಿದಾಗ- ನಾವು ಗೋವಾಕ್ಕೆ ಹೋಗುತ್ತಿದ್ದೇವೆ. ಅಲ್ಲಿ ಒಬ್ಬ ವ್ಯಕ್ತಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ನಮಗೆ ಇಷ್ಟೇ ಗೊತ್ತಿರೋದು ಎಂದು ಮಕ್ಕಳು ಪೋಲಿಸರ ಬಳಿ ಹೇಳಿಕೊಂಡಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಝಾರ್ಖಂಡ್ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.