ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಸರ್ಕಾರದ ‘ಮಾಜೆ ಘರ್’ ಯೋಜನೆಯಡಿ, ಕೋಮುನಿದಾದ್ ಜಾಗದಲ್ಲಿರುವ ಮನೆಗಳಿಗೆ, ಸರ್ಕಾರಿ ಮತ್ತು ಖಾಸಗಿ ಭೂಮಿಯಲ್ಲಿ ಅನಧಿಕೃತ ಮನೆಗಳನ್ನು ಸಜಕ್ರಮಗೊಳಿಸಲು ಅಗತ್ಯವಿರುವ ಅರ್ಜಿಗಳು ಸೋಮವಾರದಿಂದ ಸಂಬಂಧಿತ ಕಚೇರಿಗಳಲ್ಲಿ ಲಭ್ಯವಿರುತ್ತವೆ. ಈ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಪಣಜಿ ಸಮೀಪದ ಪರ್ವರಿಯ ಸಚಿವಾಲಯದಲ್ಲಿ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಈ ಮಾಹಿತಿಯನ್ನು ನೀಡಿದರು. ಅಕ್ಟೋಬರ್ 4 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಯೋಜನೆಯನ್ನು ಉಧ್ಘಾಟಿಸಿದ್ದರು.
ಯೋಜನೆಯ ಪ್ರಗತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ಮಾರ್ಗದರ್ಶನದಲ್ಲಿ ಪಣಜಿ ಸಮೀಪದ ಸಚಿವಾಲಯದಲ್ಲಿ ಸಭೆ ನಡೆಸಲಾಯಿತು. ಕಂದಾಯ ಸಚಿವ ಬಾಬುಶ್ ಮಾನ್ಸೆರಾಟ್, ಕಂದಾಯ ಇಲಾಖೆ ಕಾರ್ಯದರ್ಶಿ ಸಂದೀಪ್ ಜಾಕ್ವಿಸ್, ಉಪ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಗಳು ಮತ್ತು ಕೋಮುನಿದಾದ್ ಆಡಳಿತಾಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ ಸಾವಂತ್- ‘ಮಾಜೆ ಘರ್’ ಯೋಜನೆಯಡಿ ಹನ್ನೊಂದು ವಿಭಿನ್ನ ರೀತಿಯ ಅರ್ಜಿಗಳಿವೆ ಎಂದು ಹೇಳಿದರು. ಈ ಯೋಜನೆಯ ಪ್ರಮುಖ ಐದು ಅರ್ಜಿಗಳು ಸೋಮವಾರದಿಂದ ಅರ್ಜಿದಾರರಿಗೆ ಲಭ್ಯವಾಗಲಿವೆ. ಯೋಜನೆಯ ಅರ್ಜಿಗಳು, ಅವುಗಳ ಸ್ವರೂಪದ ಬಗ್ಗೆ ಅಧಿಕಾರಿಗಳು ವಿವರವಾದ ಮಾಹಿತಿಯನ್ನು ನೀಡಿದ್ದಾರೆ ಮತ್ತು ಅವರಿಗೆ ಕೈಪಿಡಿಯನ್ನು ಸಹ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಈನಿದು ಮಾಜೆ ಘರ್ ಯೋಜನೆ…?
ಗೋವಾ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾಜೆ ಘರ್ ಯೋಜನೆಯ ಅಡಿಯಲ್ಲಿ ಗೋವಾದಲ್ಲಿ ಕಳೆದ 15 ವರ್ಷಕ್ಕಿಂತ ಮೊದಲು ಸರ್ಕಾರಿ ಅಥವಾ ಕೋಮುನಿದಾದ್ ಜಾಗದಲ್ಲಿ ಮನೆಯನ್ನು ನಿರ್ಮಿಸಿ ವಾಸಿಸುತ್ತಿದ್ದರೆ ಅಂತವರಿಗೆ ನಾಮಮಾತ್ರ ಶುಲ್ಕ ಪಡೆದು ಅವರ ಮನೆಯ ಜಾಗದ ಮಾಲೀಕತ್ವ ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಕಳೆದ 15 ವರ್ಷಕ್ಕಿಂತ ಮೊದಲು ಕರ್ನಾಟಕದಿಂದ ಗೋವಾಕ್ಕೆ ಬಂದು ಇಂತಹ ಜಾಗದಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿದ್ದರೆ ಅವರಿಗೂ ಕೂಡ ಮಾಜೆ ಘರ್ ಯೋಜನೆಯ ಅಡಿಯಲ್ಲಿ ಮನೆಯ ಜಾಗದ ಮಾಲೀಕತ್ವದ ಹಕ್ಕನ್ನು ಪಡೆದುಕೊಳ್ಳಲಿದ್ದಾರೆ.