ಸುದ್ಧಿಕನ್ನಡ ವಾರ್ತೆ

ಪಣಜಿ(ಮಡಗಾಂವ): ಶಿರಡಿಯ ದೇವದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ರೈಲ್ವೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದ ಮಡಗಾಂವನ ಆರಾಧ್ಯ ರಾಜೇಶ್ ಮಾಂದ್ರೇಕರ್ ಎಂಬ ಬಾಲಕನ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಈ ಬಾಲಕನ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತ್ವರಿತವಾಗಿ ವೈದ್ಯಕೀಯ ಉಪಚಾರ ಲಭಿಸಿದ್ದರೆ ಈತನ ಪ್ರಾಣ ಉಳಿಯುತ್ತಿತ್ತು ಎಂದು ಪಾಲಕರು ದುಃಖ ತೋಡಿಕೊಂಡಿದ್ದಾರೆ. ಆರಾಧ್ಯ ರಾಜೇಶ್ ಮಾಂದ್ರೇಕರ್ ಈ 7 ವರ್ಷದ ಬಾಲಕನು ಶಿರಡಿಯಿಂದ ಗೋವಾಕ್ಕೆ ವಾಪಸ್ಸಾಗುತ್ತಿದ್ದಾಗ ರೈಲಿನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಅಪಘಾತವಾದ ತಕ್ಷಣ ಆರಾಧ್ಯನ ತಂದೆ ರಾಜೇಶ್ ರವರು ಕೂಡಲೆ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದರು ಎನ್ನಲಾಗಿದೆ. ಇದರಿಂದಾಗಿ ಹೆಚ್ಚಿನ ಸಮಯ ವ್ಯರ್ಥವಾಯಿತು, ಕೂಡಲೇ ಚಿಕಿತ್ಸೆ ಲಭಿಸಿದ್ದರೆ ನನ್ನ ಮಗ ಬದುಕುಳಿಯುತ್ತಿದ್ದ ಎಂದು ತಂದೆ ರಾಜೇಶ್ ರವರು ಅಳಲು ತೋಡಿಕೊಂಡರು.
                                         ರೈಲ್ವೆ ಸುರಕ್ಷತೆಯ ಬಗ್ಗೆ ಪ್ರಶ್ನೆ…?
ಬಾಲಕ ಆರಾಧ್ಯನ ರೈಲ್ವೆ ಅಪಘಾತದ ನಂತರ ರೈಲ್ವೆ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆ ಎದುರಾಗುವಂತಾಗಿದೆ. ರೈಲ್ವೆ ಸೀಟ್ ಬಳಿಯ ಎಮರ್ಜನ್ಸಿ ಕಿಡಕಿ ಅರ್ಧಕ್ಕೆ ತೆಗೆದುಕೊಂಡಿತ್ತು. ಅಲ್ಲಿ ಬಾಲಕ ಆರಾಧ್ಯ ಆಯತಪ್ಪಿ ರೈಲಿನಿಂದ ಹೊರಕ್ಕೆ ಬಿದ್ದ ಎನ್ನಲಾಗಿದೆ. ಕೂಡಲೆ ತಂದೆ ರಾಜೇಶ್ ರವರು ರೈಲ್ವೆ ಚೈನ್ ಎಳೆದರು. ಆದರೆ ರೈಲು ಸುಮಾರು 1 ಕಿ.ಮಿ ದೂರ ಹೋಗಿ ನಿಂತಿತು. ಅದು ರಾತ್ರಿಯ ವೇಳೆಯಾಧ್ಯರಿಂದ ಮಗನನ್ನು ಹುಡುಕುವುದು ತುಂಬಾ ತಡವಾಯಿತು. ನಂತರ ವೈದ್ಯಕೀಯ ಚಿಕಿತ್ಸೆಯೂ ಲಭಿಸಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಹಾಗೂ ರೈಲ್ವೆ ಸುರಕ್ಷತೆಯ ಬಗ್ಗೆ ಕೂಡ ಹೆಚ್ಚಿನ ಚರ್ಚೆಯಾಗುವಂತಾಗಿದೆ.

                                            ಶೋಕಸಾಗರದಲ್ಲಿಕುಟುಂಬ…

ಬಾಲಕ ಆರಾಧ್ಯ ಈತನು ಮಡಗಾಂವ ಲಾಯಲಾ ಹೈಸ್ಕೂಲ್ ನಲ್ಲಿ ಎರಡನೇಯ ತರಗತಿಯಲ್ಲಿ ಓದುತ್ತಿದ್ದ. ಕಳೆದ ಸಪ್ಟೆಂಬರ್ 1 ರಂದು ಮಡಗಾಂವ ಹೋಟೆಲ್ ವೊಂದರಲ್ಲಿ 7 ನೇಯ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಬಾಲಕ ಆರಾಧ್ಯನ ಹಟದಿಂದಾಗಿ ಹುಟ್ಟುಹಬ್ಬಕ್ಕೆ ಎಲ್ಲ ಸಂಬಂಧಿಕರನ್ನೂ ಕರೆದು ವಿಜ್ರಂಭಣೆಯಿಂದ ಆಚರಿಸಲಾಗಿತ್ತು. ರಾಜೇಶ್ ದಂಪತಿಗಳಿಗೆ ಮದುವೆಯಾಗಿ 7 ವರ್ಷಗಳ ನಂತರ ಆರಾಧ್ಯ ಜನಿಸಿದ್ದ ಎನ್ನಲಾಗಿದೆ. ಆದರೆ ದುರಾದೃಷ್ಠವಶಾತ್ ಆರಾಧ್ಯ ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.