ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ನವರಾತ್ರಿ ಉತ್ಸವವನ್ನು ವಿವಿಧ ದೇವಸ್ಥಾನಗಳಲ್ಲಿ ಶೃದ್ಧಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ನವರಾತ್ರಿ ಉತ್ಸವ ಆರಂಭಗೊಂಡಿದ್ದು ವಿವಿಧ ದೇವಸ್ಥಾನಗಳಲ್ಲಿ ದುರ್ಗಾ ದೇವಿಯ ಪ್ರತಿಷ್ಠಾಪಿಸಲಾಗಿದೆ.
ಗೋವಾದ ಬೋರಿ ನವದುರ್ಗಾ, ಮಡಕಯಿ, ಶಿರೋಡಾ ಕಾಮಾಕ್ಷಿ, ಮಾರ್ದೋಳದ ಮಾಲಸಾ, ಬಾಂದೋಡಾದ ಮಹಾಲಕ್ಷ್ಮಿ , ರಾಮನಾಥಿ ರಾಮನಾಥ, ಮಂಗೇಶಿಯ ಮಂಗೇಶ ದೇವಸ್ಥಾನ, ನಾಗೇಶಿಯ ನಾಗೇಶ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಮಕರೋತ್ಸವ ನಡೆಸಲಾಗುತ್ತಿದೆ.
ಗೋವಾದಲ್ಲಿ ಮಕರೋತ್ಸವ ನವರಾತ್ರಿಯ ವಿಶೇಷವಾಗಿದೆ. ಉಯ್ಯಾಲೆಯಂತಿರುವ ಮಕರದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಮಂಗಳಾರತಿಯ ಸಂದರ್ಭದಲ್ಲಿ ಈ ಮಕರವನ್ನು ತೂಗಲಾಗುತ್ತದೆ. ಈ ಉತ್ಸವ ಗೋವಾದ ಕೆಲವೇ ಕೆಲವು ದೇವಸ್ಥಾನಗಳಲ್ಲಿ ಮಾತ್ರ ಕಾಣಬಹುದಾಗಿದೆ.
ನವರಾತ್ರಿಯ ಸಂದರ್ಭದಲ್ಲಿ ದೇವಿಯರಿಗೆ ಉಡಿ ತುಂಬುವ ಪದ್ಧತಿಯಿದ್ದು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಹತ್ತಿರದ ದೇವಿಯ ದೇವಸ್ಥಾನಕ್ಕೆ ತೆರಳಿ ಉಡಿ ಸೇವೆ ಸಲ್ಲಿಸುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಮಕರೋತ್ಸವ ದರ್ಶನಕ್ಕೂ ಕೂಡ ಭಕ್ತಾದಿಗಳು ವಿವಿಧ ದೇವಸ್ಥಾನಗಳಿಗೆ ತೆರಳುವುದನ್ನು ಕಾಣಬಹುದಾಗಿದೆ.