ಸುದ್ದಿ ಕನ್ನಡ ವಾರ್ತೆ
ಅಂಕೋಲಾ : ಬಸ್ ಮತ್ತು ಟ್ಯಾಂಕರ್ ನಡುವೆ ನಡೆದ ಬೀಕರ ಅಪಘಾತದಲ್ಲಿ ಬಸ್ ಪ್ರಯಾಣಿಕ ಸೇರಿದಂತೆ ಟ್ಯಾಂಕರ್ ಚಾಲಕ ಸ್ಥಳದಲ್ಲಿ ಮೃತಪಟ್ಟು 9 ಜನರಿಗೆ ಗಂಭೀರ ಗಾಯಗಳಾದ ಘಟನೆ ಅಗಸೂರ ಗ್ರಾಮದ ಅಡ್ಲೂರು ರಾಷ್ಟ್ರೀಯ ಹೆದ್ದಾರಿ 66 ಬಳಿ ನಡೆದಿದೆ
ವಿಜಯಪುರ ಮುದ್ದೇಬಿಹಾಳ ಗ್ರಾಮದ ಟ್ಯಾಂಕರ್ ಚಾಲಕ ಶರಣಪ್ಪ ಸಂಗಪ್ಪ ಕೋಳುರ (30) ಮತ್ತು ಬಸ್ ಪ್ರಯಾಣಿಕ ಅಂಕೋಲಾ ಕೇಣಿ ಗ್ರಾಮದ ಬಾಸ್ಕರ ಪಾಂಡುರಂಗ ಗಾಂವಕರ (50) ಮೃತ ದುರ್ದೈವಿಗಳು.
ಅವರ್ಸಾ ದಂಡೆಭಾಗ ಗ್ರಾಮದ ಬಸ್ ಚಾಲಕ ಕಮಲಾಕರ ಸಾತು ನಾಯ್ಕ (40), ಕುಮಟಾ ತಾಲೂಕಿನ ಕೊಡಕಣಿ ಗ್ರಾಮದ ನಿರ್ವಾಹಕ ಚಂದ್ರಹಾಸ ತಂದೆ ನಾರಾಯಣ ನಾಯ್ಕ (57), ಅಂಕೋಲಾ ಬಾವಿಕೆರಿಯ ಶಿಕ್ಷಕಿ ವೀಣಾ ವೇಂಕಟ್ರಮಣ ನಾಯಕ (52), ಅಲಗೇರಿಯ ಪ್ರಜ್ಞಾ ಪ್ರದೀಪ ನಾಯ್ಕ(39), ಬೆಳಸೆಯ ಸಾವಿತ್ರಿ ದಾಕು ಗೌಡ, (49), ಮಾದನಗೇರಿಯ ಶ್ರೀಧರ ಈಶ್ವರ ಹರಿಕಂತ್ರ (37), ಹೆಗ್ಗಾರ್ ಮಕ್ಕಿಗದ್ದೆಯ ರಾಧಾಕೃಷ್ಣ ಮಹಾಬ್ಲೇಶ್ವರ ನಾಯ್ಕ (61), ಅಲಗೇರಿಯ ವಿದ್ಯಾರ್ಥಿ ಸಾನ್ವಿ ತಂದೆ ಪ್ರದೀಪ ನಾಯ್ಕ (9) , ಅವರ್ಸಾದ ರಕ್ಷಾ ರಾಘವೇಂದ್ರ ಬಾನಾವಳಿ (39) ಬಾವಿಕೇರಿಯ ಬೀರಪ್ಪ ಹನಮಂತ ನಾಯ್ಕ ಗಾಯಗೊಂಡವರಾಗಿದ್ದಾರೆ.
ಅಂಕೋಲಾ ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ಟ್ಯಾಂಕರ ಹೋಗುತ್ತಿದ್ದು ಟ್ಯಾಂಕರ ಚಾಲಕನ ಅಜಾಗರೂಕತೆಯಿಂದ ಎದುರಿನಿಂದ ಬರುತ್ತಿದ್ದ ಅಂಕೋಲಾ ಘಟಕದ ಬಸ್ ಮಕ್ಕಿಗದ್ದೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಸಂದರ್ಭದಲ್ಲಿ ನೇರವಾಗಿ ಟ್ಯಾಂಕರ್ ಬಂದು ಬಡಿದ ಪರಿಣಾಮ ಅಪಘಾತ ನಡೆದಿದೆ. ಘಟನೆಯಲ್ಲಿ ಬಸ್ ಮತ್ತು ಟ್ಯಾಂಕರ ಸಂಪೂರ್ಣವಾಗಿ ಜಖಂಗೊಂಡಿದೆ.
ಗಾಯಾಳುಗಳನ್ನು ತಕ್ಷಣ ಅಂಕೋಲಾ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಘಟನಾ ಸ್ಥಳಕ್ಕೆ ಮತ್ತು ಅಂಕೋಲಾ ತಾಲೂಲಾಸ್ಪತ್ರೆಗೆ ಉತ್ತರ ಕನ್ನಡ ಪೊಲೀಸ ವರೀಷ್ಠಾಧಿಕಾರಿ ದೀಪನ್ ಎಂ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗಸೂರಿನ ಅಡ್ಲೂರಿನಲ್ಲಿ ಬಸ್ ಮತ್ತು ಟ್ಯಾಂಕರ ಅಪಘಾತ ನಡೆದಿದ್ದು ಅಪಘಾತದಲ್ಲಿ ಇಬ್ಬರು ಮೃತ ಪಟ್ಟು 9ಜನ ಗಾಯಗೊಂಡಿದ್ದಾರೆ. ಇದರಲ್ಲಿ ಬಸ್ ಚಾಲಕನನ್ನು ಮಂಗಳೂರು ಆಸ್ಪತ್ರೆಗೆ ಮತ್ತು ನಿರ್ವಾಹಕನನ್ನು ಹೊನ್ನಾವರ ಆಸ್ಪತ್ರೆಗೆ ಇನ್ನೂಳಿದ 7 ಜನ ಗಾಯಾಳುಗಳನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೀಪನ್ ಎಂ
ಪೊಲೀಸ್ ವರೀಷ್ಠಾಧಿಕಾರಿ
ಉತ್ತರ ಕನ್ನಡ ರವರು ಮಾಹಿತಿ ನೀಡಿದ್ದಾರೆ.