ಸುದ್ದಿ ಕನ್ನಡ ವಾರ್ತೆ

ಶಿರಸಿ: ಹಿರಿಯ ತಾಳಮದ್ದಳೆ ಕಲಾವಿದರಾಗಿದ್ದ ದಿ. ಚಂದುಬಾಬು‌ ಅವರ ಸಂಸ್ಮರಣದಲ್ಲಿ ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ನೀಡುವ ಚಂದುಬಾಬು ಪ್ರಶಸ್ತಿಯನ್ನು ಈ ಬಾರಿ ಹಿರಿಯ ಕಲಾವಿದ ಕೆರೆಕೊಪ್ಪ ಸುಬ್ರಾಯ ಹೆಗಡೆ ಅವರಿಗೆ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಟ್ರಸ್ಟ್ ನ ಮುಖ್ಯಸ್ಥ ಚಂದು‌ ಸೀತಾರಾಮ ತಿಳಸಿದ್ದಾರೆ.

ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ವಿಶೇಷ ಗುರುತು ಮೂಡಿಸಿದ ಸುಬ್ರಾಯ ಹೆಗಡೆ ಕೆರೆಕೊಪ್ಪ ಅವರು ಕೃಷಿ ಹಾಗೂ ಕಲೆಯ ಸಾಂಗತ್ಯದಲ್ಲಿ ಗಮನ ಸೆಳೆದವರು. ಓದಿದ್ದು ಏಳನೇ ತರಗತಿ ಆದರೂ ಬಾಲ್ಯದಿಂದಲೇ ಯಕ್ಷಗಾನದ ಮೇಲಿನ ಆಕರ್ಷಣೆಯಿಂದ 15ನೇ ವಯಸ್ಸಿನಲ್ಲಿ ತಾಳಮದ್ದಳೆಯಲ್ಲಿ ಅರ್ಥ ಹೇಳಲಾರಂಭಿಸಿದವರು. ಕೋವೆಸರ ಮಂಜುನಾಥ ಹೆಗಡೆ ಹಾಗೂ ದಿವಂಗತ ಚಂದುಬಾಬು ಅವರ ಭೀಮ–ದ್ರೌಪದಿಯ ಪ್ರಸಿದ್ಧ ಸಂವಾದ ಇವರಿಗೆ ಅರ್ಥಗಾರಿಕೆಯ ಪ್ರೇರಣೆಯ ಮೂಲವಾಗಿದೆ. ಇದೇ ಪ್ರೇರಣೆಯಿಂದ ಮುಂದಕ್ಕೆ ದಿವಂಗತ ವೆಂಕಟಾಚಲ ಭಟ್ಟ ಕೆರೆಮನೆ ಮತ್ತು ದಿವಂಗತ ಹೊಸತೋಟ ಮಂಜುನಾಥ ಭಾಗವತರ ಸಮೀಪದಲ್ಲಿ ಕಳೆದ ದಿನಗಳು ಇವರ ಕಲಾಜೀವನಕ್ಕೆ ಮತ್ತಷ್ಟು ಬೆಳಕು ತಂದವು.

ಉತ್ತರ ಕನ್ನಡದ ಹೊರತಾಗಿಯೂ ಸಾಗರ, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ತಮ್ಮ ಅರ್ಥಗಾರಿಕೆಯಿಂದ ಪ್ರೇಕ್ಷಕರನ್ನು ರಂಜಿಸಿದ ಸುಬ್ಬಣ್ಣ, ಸಂಘಟಕರಾಗಿ, ಮಕ್ಕಳಿಗೆ, ಮಹಿಳೆಯರಿಗೆ ತಾಳಮದ್ದಳೆ ತಿಳಿಸಿಕೊಟ್ಟವರು. ಅನೇಕ ಪ್ರಶಸ್ತಿ ಪುರಸ್ಕಾರ ಕೂಡ ಪಡೆದ ಸುಬ್ರಾಯ ಹೆಗಡೆ ಅವರಿಗೆ ಅಕ್ಟೋಬರ್ ಮೊದಲ ವಾರ ಶಿರಸಿಯಲ್ಲಿ ನಡೆಯಲಿರುವ ಸರಣಿ ತಾಳಮದ್ದಳೆಯಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.