ಸುದ್ಧಿಕನ್ನಡ ವಾರ್ತೆ
ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಸುಮಾರು 100 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ ಗೋಡೆಯ ಮೇಲಿನ ಮಣ್ಣಿನ ಗಣಪ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದಾನೆ. ಈ ಗಣಪ ಬೇಡಿದ್ದನ್ನು ಕೊಡುವ ಗಣಪ ಎಂದೇ ಪ್ರಸಿದ್ಧಿ ಪಡೆದಿದ್ದು, ಈ ಗಣಪ ಅಂಕೋಲಾದ ತಹಶೀಲ್ದಾರ ಕಛೇರಿಯಲ್ಲಿ ಕಳೆದ 100 ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡಿದ್ದಾನೆ.

ಹಿನ್ನೆಲೆ..
ಬ್ರಿಟೀಷ್ ಆಡಳಿತ ಕಾಲದಲ್ಲಿ ಅಂಕೋಲಾದ ತಹಶೀಲ್ದಾರ ಕಛೇಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾಗ ಇಲ್ಲಿನ ಗೋಡೆ ಪದೆ ಪದೆ ಕುಸಿತಗೊಳ್ಳುತ್ತಿತ್ತು. ಪರಿಣಿತರ ಸಹಾಯ ಪಡೆದರೂ ಕೂಡ ಗೋಡೆ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ. ಗೋಡೆಯ ಮೇಲೆ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡಿದಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ಇಲ್ಲಿನ ಕಾರ್ಮಿಕರು ಅಂದು ಬ್ರಿಟೀಷ ಅಧಿಕಾರಿಗಳಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗೋಡೆಯ ಮೇಲೆ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸುವಂತೆ ಬ್ರಿಟಿಷ್ ಅಧಿಕಾರಿಗಳು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಮಣ್ಣಿನ ಗಣಪ ಗೋಡೆಯ ಮೇಲೆ ಪ್ರತಿಷ್ಠಾಪನೆಗೊಂಡ ಎನ್ನಲಾಗಿದೆ.
ಸದ್ಯ ಗಣೇಶ ಚತುರ್ಥಿಯ ಹಬ್ಬದ ಸಂದರ್ಭದಲ್ಲಿ ಈ ಮಣ್ಣಿನ ಗಣಪನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿನ ತಹಶೀಲ್ದಾರ ಕಛೇರಿಗೆ ಆಗಮಿಸುತ್ತಿದ್ದಾರೆ. ಭಕ್ತಾದಿಗಳು ಬೇಡಿಕೊಂಡ ಹಲವು ಬೇಡಿಕೆಗಳು ಈಡೇರಿದ ಹತ್ತಾರು ಉದಾಹರಣೆಗಳಿವೆ. ಇದರಿಂದಾಗಿ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ.

ಅಂಕೋಲಾದ ತಹಶೀಲ್ದಾರ ಕಛೇರಿಗೆ ಬಂದ ಜನರಂತೂ ಈ ಗಣಪನಿಗೆ ನಮಸ್ಕರಿಸಿಯೇ ಮುಂದೆ ಸಾಗುತ್ತಾರೆ. ನೀವು ಕೂಡ ಅಂಕೋಲಾಕ್ಕೆ ಭೇಟಿ ನೀಡಿದರೆ ಇಲ್ಲಿನ ತಹಶೀಲ್ದಾರ ಕಛೇರಿಗೆ ಬಂದು 100 ವರ್ಷಗಳಷ್ಟು ಹಳೇಯ ಈ ಮಣ್ಣಿನ ಗಣಪನ ದರ್ಶನ ಪಡೆಯುವುದನ್ನು ಮರೆಯಬೇಡಿ.

 


An earthen Ganesha on a wall installed around 100 years ago in Ankola in Uttara Kannada district is attracting devotees. This Ganap is popularly known as Ganap who gives bedi, this Ganap was installed in the Tehsildar office of Ankola 100 years ago.