ಸುದ್ಧಿಕನ್ನಡ ವಾರ್ತೆ
ಪಣಜಿ: ಗೌರಿಗಣೇಶ ಹಬ್ಬವನ್ನು ಗೋವಾ ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಈಗಾಗಲೇ ಒಂದೂವರೆ ದಿನ, ಐದು ದಿನ ಪೂಜಿಸಲ್ಪಟ್ಟ ಗಣೇಶನನ್ನು ವಿಸರ್ಜನೆ ಮಾಡಲಾಗಿದೆ. ಆದರೆ ವಿಸರ್ಜನೆ ಮಾಡಲಾಗಿರುವ ಗಣೇಶ ಮೂರ್ತಿಗಳ ಸ್ಥಿತಿ ಕಂಡರೆ ಕಣ್ಣಲ್ಲಿ ನೀರು ತುಂಬುತ್ತದೆ. ಏಕೆಂದರೆ ವಿಸರ್ಜನೆಗೊಂಡ ಗಣೇಶ ಮೂರ್ತಿಗಳು ಅರ್ಧಂಬರ್ದ ಕರಗಿ ಸಮುದ್ರದ ದಡಕ್ಕೆ ಬಂದು ಬಿದ್ದಿರುವ ದೃಶ್ಯ ಮನ ಕಲಕುವಂತಿದೆ.

ಗೋವಾದ ಮೊರ್ಜಿಮ್ ಸಮುದ್ರ ತೀರದಲ್ಲಿ ಇಂತಹ ಅರ್ಧಂಬರ್ಧ ಕರಗಿ ದಡಕ್ಕೆ ಬಂದು ಬಿದ್ದಿರುವ ಹಲವಾರು ಗಣೇಶ ಮೂರ್ತಿಗಳನ್ನು ಕಾಣಬಹುದಾಗಿದೆ. ಇದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಗೋವಾದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಲಾಗಿದೆ. ಹೀಗಿದ್ದರೂ ಕೂಡ ಗೋವಾದಲ್ಲಿ ಇಂತಹ ಮೂರ್ತಿಗಳು ಎಲ್ಲಿಂದ ಬಂದವು..? ಎಂಬ ಪ್ರಶ್ನೆ ಮೂಡಿದೆ. ಗೋವಾದ ಗಡಿ ಭಾಗದಲ್ಲಿಯೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳು ಗೋವಾ ಪ್ರವೇಶಿಸಿದಂತೆ ತಪಾಸಣೆಯನ್ನೂ ನಡೆಸಲಾಗಿತ್ತು. ಇಷ್ಟೇ ಅಲ್ಲದೆಯೇ ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂರ್ತಿಗಳ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಗೋವಾ ಸರ್ಕಾರ ಎಚ್ಚರಿಕೆ ನೀಡಿತ್ತು. ಆದರೆ ಇಷ್ಟೊಂದು ಕಟ್ಟು ನಿಟ್ಟಿನ ಕ್ರಮದ ನಡುವೆಯೂ ಗೋವಾದಲ್ಲಿ ಭಾರಿ ಪ್ರಮಾಣದಲ್ಲಿ ಪ್ಯಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳು ಮಾರಾಟವಾಗಿರುವುದು ಬೇಸರದ ಸಂಗತಿಯೇ ಆಗಿದೆ.

ಗಣೇಶ ಚತುರ್ಥಿಯು ಶೃದ್ಧಾ ಭಕ್ತಿಯ ಉತ್ಸವವಾಗಿದೆ. ನಾವು ಭಕ್ತಿಬಾವದಿಂದ ಗಣೇಶನನ್ನು ಕರೆತಂದು ಪೂಜಿಸುತ್ತೇವೆ. ನಮಗೆ ಗಣೇಶನನ್ನು ಪೂಜಿಸುವಾಗ ಎಷ್ಟು ಜವಾಬ್ದಾರಿ ಇರುತ್ತದೆಯೋ ಅಷ್ಟೇ ಜವಾಬ್ದಾರಿ ಗಣೇಶನನ್ನು ವಿಸರ್ಜನೆ ಮಾಡುವಾಗಲೂ ಇರಬೇಕು ಹಾಗೂ ಗಣೇಶ ಮೂರ್ತಿಯನ್ನು ಖರೀದಿಸುವಾಗಲೂ ಇರುವುದು ಬಹಳ ಮುಖ್ಯ. ನಾವು ವಿಸರ್ಜನೆ ಮಾಡಿದ ಗಣೇಶ ಮೂರ್ತಿಗಳು ಈರೀತಿ ಬೀಚ್ ನಲ್ಲಿ ಅರ್ಧಂಬರ್ಧ ಕರಗಿ ಬಂದು ಬಿದ್ದರೆ ಗಣೇಶನನ್ನು ಪೂಜಿಸಿ ಏನು ಫಲ ಎಂದು ನಾವೇ ನಮ್ಮೊಳಗೆ ಯೋಚಿಸಬೇಕಿದೆ.

ಗಣೇಶನನ್ನು ವಿಸರ್ಜನೆ ಮಾಡಿದ ನಂತರ ತಮ್ಮ ಜವಾಬ್ದಾರಿ ಮುಗಿಯಿತು ಎಂದರ್ಥವಲ್ಲ. ಮರುದಿನ ಮತ್ತೆ ಅದೇ ಸ್ಥಳಕ್ಕೆ ಹೋಗಿ ನಮ್ಮ ಗಣೇಶನ ವಿಸರ್ಜನೆ ಸರಿಯಾಗಿ ಆಗಿದೆಯೇ ಎಂದು ಕೂಡ ನೋಡಿ ಬರುವುದು ಬಹಳ ಮುಖ್ಯ. ಇಷ್ಟೇ ಅಲ್ಲದೆಯೇ ಎಲ್ಲರೂ ಕೂಡ ಖಡ್ಡಾಯವಾಗಿ ಮಣ್ಣಿನ ಗಣಪನನ್ನೇ ತಂದು ಪೂಜಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳು ಪರಿಸರಕ್ಕೂ ಹಾನಿಯಾಗಿದೆ. ಕೇವಲ ಸರ್ಕಾರ ಹೇಳಿದೆ ಎಂದು ನಾವು ಕರ್ತವ್ಯ ನಿರ್ವಹಿಸುವುದಲ್ಲ, ನಮಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ.

 


Gauri Ganesh festival is celebrated with great enthusiasm across the state of Goa. Ganesha, who was already worshiped for one and a half days, five days, has been dissolved. But seeing the condition of the Ganesha idols that have been dissolved brings tears to the eyes. Because the sight of dissolved Ganesha idols half melted and lying on the sea shore is mind-blowing.