ಸುದ್ಧಿಕನ್ನಡ ವಾರ್ತೆ
ಪಣಜಿ: ಎಚ್ಚರ ಪ್ರವಾಸಿಗರೇ ಎಚ್ಚರ…! ಗೋವಾದಿಂದ ಚೋರ್ಲಾ ಘಾಟ್ ಮಾರ್ಗದಲ್ಲಿ ಕರ್ನಾಟಕ ಭಾಗದ ರಸ್ತೆ ಭಾರಿ ದೊಂಡಗಳಿಂದ ಕೂಡಿದೆ. ಮಳೆಗಾಲದ ಸಂದರ್ಭದಲ್ಲಿ ಹಲವೆಡೆ ರಸ್ತೆಯ ಹೊಂಡಗಳಲ್ಲಿ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸುವುದನ್ನು ನಾವು ನೋಡಿದ್ದೇವೆ. ಸದ್ಯ ಗೋವಾದಿಂದ ಚೋರ್ಲಾ ಘಾಟ್ ರಸ್ತೆ ಕರ್ನಾಟಕ ಭಾಗದಲ್ಲಿ ರಸ್ತೆ ಹೊಂಡದಲ್ಲಿ ಗಿಡಗಳಲ್ಲ ದೊಡ್ಡ ಮರವನ್ನೇ ನೆಡುವಷ್ಟು ದೊಡ್ಡ ಗಾತ್ರದ ಹೊಂಡ ಬಿದ್ದಿದೆ.

ಗೋವಾದಿಂದ ಬೆಳಗಾವಿ ರಸ್ತೆಯು ಸದ್ಯ ತೀರಾ ಗಂಭೀರ ಪರಿಸ್ಥಿತಿಗೆ ತಲುಪಿದೆ. ಭಾರಿ ಪ್ರಮಾಣದಲ್ಲಿ ಹೊಂಡಗಳಿಂದ ತುಂಬಿಹೋಗಿದೆ. ಈ ಮಾರ್ಗದಲ್ಲಿ ಓಡಾಟ ನಡೆಸುವವರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಓಡಾಡುವಂತಾಗಿದೆ. ಸದ್ಯ ಭಾರಿ ಮಳೆಯಿಂದಾಗಿ ರಸ್ತೆಯ ಹೊಂಡದಲ್ಲಿ ನೀರು ತುಂಬಿದ್ದು ಅಪಘಾಟಗಳಿಗೂ ಕಾರಣವಾಗುತ್ತಿದೆ.

ಗೋವಾ ಭಾಗದಿಂದ ಅಂಜುಣೆ ಅಣೆಕಟ್ಟಿನ ಬಳಿಯಿಂದ ಕರ್ನಾಟಕದ ಗಡಿಯ ವರೆಗೆ ಸಾಧ್ಯವಾದಷ್ಟು ಕಡೆಗಳಲ್ಲಿ ರಸ್ತೆಯ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಹಲವೆಡೆ ರಸ್ತೆಯ ಬದಿಯ ಗಟಾರವಿಲ್ಲದ ಕಾರಣ ರಸ್ತೆಯ ಮೇಲೆ ನೀರು ಹರಿಯುತ್ತಿದೆ.

ಚೋರ್ಲಾ ಘಾಟ್ ಮಾರ್ಗದಲ್ಲಿ ಸದ್ಯ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದ್ದರೂ ಕೂಡ ಈ ಮಾರ್ಗದಲ್ಲಿ ಹೆಚ್ಚಿನ ಸನಖ್ಯೆಯಲ್ಲಿ ಭಾರಿ ವಾಹನಗಳು ಓಡಾಟ ನಡೆಸುತ್ತಿದೆ. ಈ ಮಾರ್ಗದಲ್ಲಿ ಕೆಲವೆಡೆ ಭಾರಿ ವಾಹನಗಳು ಹಾಳಾಗಿ ನಿಂತಿದ್ದು ಇತರ ವಾಹನಗಳ ಓಡಾಟಕ್ಕೂ ಅಡಚಣಿಯುಂಟಾಗುವಂತಾಗಿದೆ.

ಚೋರ್ಲಾ ಘಾಟ್ ನಿಂದ ಕರ್ನಾಟಕ ಭಾಗದ ರಸ್ತೆಯಂತೂ ತೀರಾ ಹದಗೆಟ್ಟಿದೆ. ಕರ್ನಾಟಕ ಸರ್ಕಾರವು ಈ ಭಾಗದ ರಸ್ತೆ ನಿರ್ಮಾಣಕ್ಕೆ ನಿರ್ಲಕ್ಷ ತೋರಿದಂತೆ ಕಂಡುಬರುತ್ತಿದೆ. ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಹೊಂಡಬಿದ್ದಿದೆ. ಒಂದೊಂದು ಹೊಂಡವಂತೂ ವಾಹನಗಳೇ ಪಲ್ಟಿಯಾಗುವಷ್ಟು ದೊಡ್ಡದಿದೆ. ರಾತ್ರಿಯಂತೂ ಈ ಮಾರ್ಗದಲ್ಲಿ ಓಡಾಟ ನಡೆಸುವುದೇ ಅಸಾಧ್ಯ ಎಂಬಂತಾಗಿದೆ. ವಾಹನ ಸವಾರರು ಹಿಡಿಶಾಪ ಹಾಕುವಂತಾಗಿದೆ.