ಸುದ್ಧಿಕನ್ನಡ ವಾರ್ತೆ
ಪಣಜಿ: ಪ್ರಿವೆನ್‍ಶನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ ಅಡಿಯಲ್ಲಿ ಬೆಂಗಳೂರಿನ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಗೋವಾದ ಪಣಜಿ ಹಾಗೂ ಕಲಂಗುಟ್ ಸೇರಿ ಒಟ್ಟೂ 7 ಕ್ಯಾಸಿನೊಗಳ ( Goa Cassino) ಮೇಲೆ ಏಕಕಾಲಕ್ಕೆ ಧಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪ್ರತ್ಯೇಕ 7 ಇಡಿ ಅಧಿಕಾರಿಗಳ ತಂಡ ಏಕಕಾಲಕ್ಕೆ ಧಾಳಿ ನಡೆಸಿದೆ.

ಈ ತನಿಖಾ ಕಾರ್ಯದಲ್ಲಿ ಆರ್ಥಿಕ ಅನಿಯಮಿತತೆ ಹಾಗೂ ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ಕೇಂದ್ರಿತವಾಗಿದೆ. ಪ್ರಮುಖ ಪ್ರವಾಸಿ ಹಾಗೂ ಗೇಮಿಂಗ್ ಆಕರ್ಷಣೆ ಎಂದೇ ಹೇಳಲಾಗುವ ಕ್ಯಾಸಿನೊದಲ್ಲಿ ಬೆಂಗಳೂರಿನ ಇಡಿ ಅಧಿಕಾರಿಗಳು ಧಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ಲಭ್ಯವಾಗಿರುವ ಮಾಹಿತಿಯ ಅನುಸಾರ-ಕರ್ನಾಟಕದ ಕೆ.ಸಿ.ವೀರೇಂದ್ರ ಉರ್ಫ ಪಪ್ಪಿ ಹಾಗೂ ರಾಜಸ್ಥಾನದ ಕ್ಯಾಸಿನೊ ಆಪರೇಟರ್ ಸಮುಂದರಸಿಂಗ್ ರಾಠೋಡ್ ರವರಿಗೆ ಸಂಬಂಧಿಸಿದ ಪ್ರಕರಣದ ತನಿಖೆ ಇದಾಗಿದೆ ಎಂದೇ ಹೇಳಲಾಗುತ್ತಿದೆ. ಈ ತನಿಖೆ ಕೇವಲ ಗೋವಾಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದಲ್ಲಿ 30 ಕ್ಕೂ ಹೆಚ್ಚು ಸ್ಥಳದಲ್ಲಿ ಇಡಿ ಏಕಕಾಲಕ್ಕೆ ಧಾಳಿ ನಡೆಸಿ ತನಿಖಾ ಕಾರ್ಯ ಕೈಗೊಂಡಿದೆ.

ಹಣ ಪಡೆದು ಆಟ ಆಡುವಂತಹ ಆನ್ ಲೈನ್ ಗೇಮಿಂಗ್ ಮೇಲೆ ಪ್ರತಿಬಂಧಕ ಖಾಯ್ದೆಗೆ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ರವರು ಶುಕ್ರವಾರ ಸಹಿ ಹಾಕಿದ್ದರು. ಸಂಸತ್ ನಲ್ಲಿ ಇತ್ತೀಚೆಗೆ ನಡೆದ ಮಳೆಗಾಲದ ಅಧಿವೇಶನದಲ್ಲಿ ಈ ಕುರಿತ ವಿಧೇಯಕಕ್ಕೆ ಮಂಜೂರಿ ನೀಡಲಾಗಿತ್ತು.

ರಾಜಸ್ಥಾನದ ಕ್ಯಾಸಿನೊ ಆಪರೇಟರ್ ಸಮುಂದರಸಿಂಗ್ ರಾಠೋಡ್ ರವರು ಕರ್ನಾಟಕದ ಹುಬ್ಬಳ್ಳಿಯಲ್ಲಿ ಹವಾಲಾ ನೆಟ್ ವರ್ಕ ನಡೆಸುತ್ತಿರುವ ಆರೋಪವಿದೆ ಎನ್ನಲಾಗಿದೆ. ಅವರು ಶ್ರೀಲಂಕಾ, ದುಬೈದಲ್ಲಿಯೂ ಕ್ಯಾಸಿನೊ ನಡಟೆಸುತ್ತಿದ್ದಾರೆ ಎನ್ನಲಾಗಿದೆ.