ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿ ಅರವಿಂದ್ ಕುಮಾರ್ ನಾಯರ್ ಮತ್ತು ರಾಜ್ಯ ಮಾಹಿತಿ ಆಯುಕ್ತರಾಗಿ ಆತ್ಮರಾಮ್ ಬರ್ವೆ ಅವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಪಿ. ಎಸ್. ಶ್ರೀಧರನ್ ಪಿಳ್ಳೆ ಅವರು ಅರವಿಂದ್ ಕುಮಾರ್ ನಾಯರ್ ಮತ್ತು ಆತ್ಮರಾಮ್ ಬರ್ವೆ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಗೋವಾ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸಾರಿಗೆ ಸಚಿವ ಮೌವಿನ್ ಗುಡಿನೋ, ಪರಿಸರ ಸಚಿವ ಅಲೆಕ್ಸ್ ಸಿಕ್ವೇರಾ, ಶಾಸಕ ರಾಜೇಶ್ ಫಲ್ದೇಸಾಯಿ, ಶಾಸಕ ಉಲ್ಲಾಸ್ ತುಯೇಕರ್ ಮತ್ತು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು. ವಾರ್ತಾ ಇಲಾಖೆ ನಿರ್ದೇಶಕ ದೀಪಕ್ ಬಾಂದೇಕರ್ ಅವರು ಆರಂಭದಲ್ಲಿ ಮುಖ್ಯ ಮಾಹಿತಿ ಆಯುಕ್ತರು ಮತ್ತು ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿ ಆದೇಶವನ್ನು ಓದಿದರು. ನೇಮಕಾತಿ ಮೂರು ವರ್ಷಗಳ ಅವಧಿಗೆ ಇರಲಿದೆ.
ಮುಖ್ಯ ಮಾಹಿತಿ ಆಯುಕ್ತರು ಮತ್ತು ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗಳು 2 ಮಾರ್ಚ್ 2024 ರಿಂದ ಖಾಲಿಯಿದ್ದವು. ಅಡ್ವ. ವಿಶ್ವಾಸ್ ಸಾತಾರ್ಕರ್ ಮತ್ತು ಸಂಜಯ್ ಧವಲಿಕರ್ ಅವರ ಅವಧಿ ಮುಗಿದ ಕಾರಣ ಈ ಎರಡೂ ಹುದ್ದೆಗಳು ಖಾಲಿಯಾಗಿದ್ದವು. ಎರಡೂ ಹುದ್ದೆಗಳು ಖಾಲಿ ಇದ್ದ ಕಾರಣ ಮಾಹಿತಿ ಆಯೋಗದ ಕಾರ್ಯ ಬಹುತೇಕ ಸ್ಥಗಿತಗೊಂಡಿತ್ತು. ಎರಡೂ ಹುದ್ದೆಗಳಿಗೆ ನೇಮಕಾತಿಯೊಂದಿಗೆ ಇದೀಗ ದೂರು ಮತ್ತು ಅರ್ಜಿಗಳ ವಿಚಾರಣೆ ಆರಂಭವಾಗಲಿದೆ.