ಸುದ್ಧಿಕನ್ನಡ ವಾರ್ತೆ
ಪಣಜಿ: ಹೊರ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವವರಿಗೆ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡುವ ಕುರಿತಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮಾಡಿದ್ದ ಮನವಿಯ ಹಿನ್ನೆಲೆಯಲ್ಲಿ ಹೊರ ರಾಜ್ಯದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಘೋಷಿಸಿದೆ. ಇದರಿಂದಾಗಿ ಗೋವಾದಲ್ಲಿ ವ್ಯಾಸಂಗ ಮಾಡಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಮತ್ತು ಕರ್ನಾಟಕದಲ್ಲಿ ಉದ್ಯೋಗ ಪಡೆಯಲು ಶೇ 5 ರಷ್ಟು ಮೀಸಲಾತಿ ಲಭಿಸುವಂತಾಗಿದೆ.

ಹೊರ ರಾಜ್ಯಗಳ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶೇ 5 ರಷ್ಟು ಮೀಸಲಾತಿ ಘೋಷಣೆಯಾಗಿರುವುದರಿಂದ ಗೋವಾದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಕೂಡ ಆಸಕ್ತಿ ತೋರುವ ಸಾಧ್ಯತೆ ಹೆಚ್ಚಾಗಿದೆ. ಗೋವಾದಲ್ಲಿ 3 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದು ಗೋವಾ ಕನ್ನಡಿಗರಿಗೂ ಇದು ಸಂತಸದ ಸಂಗತಿಯಾಗಿದೆ.

ಈ ಕುರಿತಂತೆ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿ– ಕರ್ನಾಟಕ ಸರ್ಕಾರವು ಈ ಕುರಿತು ಅಧೀಕೃತ ಆದೇಶ ಹೊರಡಿಸಿದ್ದು ಒಂದನೇಯ ತರಗತಿಯಿಂದ 10 ನೇಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಹೊರ ರಾಜ್ಯದಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬರಿಗೂ ಕರ್ನಾಟಕ ರಾಜ್ಯ ಸೇವಾ ಹುದ್ಧೆಗಳ ನೇರ ನೇಮಕಾತಿಯಲ್ಲಿ ಶೇ 5 ರಷ್ಟು ಸಮತಳ ಮೀಸಲಾತಿಯನ್ನು ಕಲ್ಪಿಸಿದೆ. ಕರ್ನಾಟಕ ಸರ್ಕಾರವು ಈ ನಿರ್ಣಯದಿಂದ ಗೋವಾದಲ್ಲಿ ವ್ಯಾಸಂಗ ಮಾಡಿದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಗೋವಾದಲ್ಲಿ ಸದ್ಯ ಸುಮಾರು 799 ಜನ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 20 ಕನ್ನಡ ಮಾಧ್ಯಮ ಶಾಲೆಗಳಿವೆ. ಕರ್ನಾಟಕ ಸರ್ಕಾರವು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಶೇ 5 ರಷ್ಟು ಮೀಸಲಾತಿ ಕಲ್ಪಿಸಿರುವುದು ಗೋವಾದಲ್ಲಿ ಹತ್ತನೇಯ ತರಗತಿಯಲ್ಲಿ ಉತ್ತೀರ್ಣರಾಗಿ ಕರ್ನಾಟಕಕ್ಕೆ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ನಾನು ಈ ಹಿಂದೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಬಳಿ ಗೋವಾದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಈ ಕುರಿತು ಮನವಿ ಮಾಡಿದ್ದೆ. ಇಂತಹ ಉತ್ತಮ ನಿರ್ಧಾರ ತೆಗೆದುಕೊಂಡ ಕರ್ನಾಟಕ ಸರ್ಕಾರಕ್ಕೆ ಹಾಗೂ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ್ ಹಾಗೂ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತೀಹಳ್ಳಿ ರವರಿಗೆ ಗೋವಾ ಕನ್ನಡಿಗರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಈ ಕುರಿತಂತೆ ಗೋವಾ ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಪ್ರತಿಕ್ರಿಯೆ ನೀಡಿ- ಹೊರ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತಂತ ಉದ್ಯೋಗಾಕಾಂಕ್ಷಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಇದರಿಂದಾಗಿ ಹೊರ ರಾಜ್ಯದಲ್ಲಿಯೂ ಕನ್ನಡ ಮಾಧ್ಯಮ ಶಾಲೆಗಳು ಉಳಿಯುವಂತಾಗಲಿದೆ ಮತ್ತು ಕನ್ನಡ ಶಾಲೆಗಳು ಮುಚ್ಚುವುದನ್ನು ತಪ್ಪಿಸಿದಂತಾಗಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದೇ ಒಂದು ಅಪರಾಧ ಎಂದುಕೊಂಡವರಿಗೆ ಇದು ವರವಾಗಿ ಪರಿಣಮಿಸಿದೆ. ಈ ಕುರಿತಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಈ ವಿಷಯವನ್ನು ಹೊರ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಮತ್ತು ಕಲಿತಿರುವ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.