ಕನ್ನಡ ವಾರ್ತೆ
ಪಣಜಿ: ಕರ್ನಾಟಕದ ಬೆಂಗಳೂರಿನಲ್ಲಿ ರಾತ್ರಿ 1 ಗಂಟೆಯ ವರೆಗೆ ರೆಸ್ಟೊರೆಂಟ್ ಗಳು ತೆರೆದಿರುತ್ತದೆ. ಅದರೆ ಪ್ರವಾಸಿ ಪ್ರಸಿದ್ಧ ರಾಜ್ಯವಾಗಿರುವ ಗೋವಾದಲ್ಲಿ ಏಕೆ ಹೀಗಿಲ್ಲ…? ಇಂತಹ ಚರ್ಚೆ ಗೋವಾ ವಿಧಾನಸಭೆಯಲ್ಲಿ ನಡೆದಿದೆ.

ಗೋವಾ ವಿಧಾನಸಭೆಯಲ್ಲಿ ಗೋವಾ ಫೊರ್ ವರ್ಡ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಮಾತನಾಡಿ- ಗೋವಾದಲ್ಲಿಯೂ ರೆಸ್ಟೊರೆಂಟ್ ಗಳು ರಾತ್ರಿ ತೆರೆದಿದ್ದರೆ ದೇಶ-ವಿದೇಶಗಳಿಂದ ಗೋವಾಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಲಿದೆ. ಇದರಿಂದಾಗಿ ಸ್ಥಳೀಯರಿಗೂ ಹೆಚ್ಚಿನ ಲಾಭವಾಗಿ, ಹೊಸದಾಗಿ ಉದ್ಯೋಗವೂ ಸೃಷ್ಠಿಯಗಲಿದೆ. ಹೊರ ರಾಜ್ಯಗಳಲ್ಲಿ ಇಂತಹ ಸೌಲಭ್ಯಗಳಿರುವುದರಿಂದ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದರು.

ಇದಕ್ಕೆ ಉತ್ತರಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್- ಗೋವಾ ರಾಜ್ಯದಲ್ಲಿ ಪ್ರವಾಸಿಗರ ಹೆಚ್ಚಳಕ್ಕೆ ಅನುಕೂಲವಾಗಲಿದೆ ಎಂದಾದರೆ ಬೆಂಗಳೂರಿನಂತೆಯೇ ಗೋವಾದಲ್ಲಿಯೂ ರೆಸ್ಟಿರೆಂಟ್ ಗಳನ್ನು ರಾತ್ರಿ 1 ಗಂಟೆಯವರೆಗೆ ತೆರೆದಿರುವ ಪ್ರಯತ್ನ ಮಾಡಲಾಗುವುದು ಎಂದರು.
ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- ತಡ ರಾತ್ರಿಯ ವರೆಗೆ ರೆಸ್ಟೊರೆಂಟ್ ತೆರೆದಿರುವುದಕ್ಕೆ ಪರಿಸರ ಪ್ರೇಮಿಗಳ ವಿರೋಧವಿದೆ. ರಾತ್ರಿ ರೆಸ್ಟೊರೆಂಟ್ ತೆರೆದಿರುವುದರಿಂದ ಶಬ್ದ ಮಾಲಿನ್ಯ ಮತ್ತು ಕಸದ ಸಮಸ್ಯೆ ಉಂಟಾಗುತ್ತದೆ ಮತ್ತು ರಾತ್ರಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತದೆ. ಮಾಲಿನ್ಯಕ್ಕೆ ಸಂಬಂಧಿಸಿದ ದೂರು ಕೂಡ ಹೆಚ್ಚಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಗೋವಾದಲ್ಲಿ ತಡರಾತ್ರಿಯ ವರೆಗೂ ರೆಸ್ಟೊರೆಂಟ್ ತೆರೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಈ ಹಿಂದೆಯೂ ಕೂಡ ಚರ್ಚೆಯಾಗಿದೆ. ಸ್ಥಳೀಯರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ನಿರ್ಣಯಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಕುರಿತು ಅಗತ್ಯ ಚರ್ಚೆ ನಡೆಸಿ ನಿರ್ಣಯ ತಗೆದುಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಪ್ರಮೋದ ಸಾವಂತ್ ನೀಡಿದರು.