ಸುದ್ಧಿಕನ್ನಡ ವಾರ್ತೆ
ಪಣಜಿ: ನಮ್ಮ ದೈನಂದಿನ ಆಹಾರದ ಮುಖ್ಯ ಹಾಗೂ ಧಾರ್ಮಿಕ ಕಾರ್ಯದಲ್ಲಿ ಮಹತ್ವದ ಸ್ಥಾನ ಪಡೆದಿರುವ ತೆಂಗಿನ ಕಾಯಿ ದರ ದಿನೆ ದಿನೇ ಹೆಚ್ಚುತ್ತಿದೆ. ಗೋವಾ ರಾಜ್ಯದಲ್ಲಿ ತೆಂಗಿನ ಕಾಯಿ ದರ 70 ರೂಪಾಯಿಗೆ ತಲುಪಿದ್ದು, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗೋವಾದಲ್ಲಿ ತೆಂಗಿನ ಕಾಯಿ ದರ 100 ರೂ ಗೆ ತುಪುವ ಸಾಧ್ಯತೆಯಿದೆ ಎಂದು ತೆಂಗಿನ ಕಾಯಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ 50 ರೂ ಇದ್ದ ತೆಂಗಿನಕಾಯಿ ದರ ದಿಢೀರ್ ನೆ 15 ರಿಂದ 20 ರೂ ಏರಿಕೆಯಾಗಿ 70 ರೂಗಳಿಗೆ ತಲುಪಿದೆ. ಗೋವಾ ರಾಜ್ಯದಲ್ಲಿ ಸದ್ಯ ದೊಡ್ಡ ಗಾತ್ರದ ತೆಂಗನಕಾಯಿಯನ್ನು 70 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಸದ್ಯ ಶ್ರಾವಣ ಮಾಸ ಆರಂಭಗೊಂಡ ನಂತರ ರಾಜ್ಯದಲ್ಲಿ ಮನೆ ಮನೆಯಲ್ಲಿ ಪೂಜಾಕಾರ್ಯಕ್ರಮಗಳು ಹೆಚ್ಚಾಗಿರುತ್ತದೆ. ಇದರಿಂದಾಗಿಯೂ ತೆಂಗಿನ ಕಾಯಿ ಬಳಕೆ ಹೆಚ್ಚಾಗುತ್ತದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗೋವಾದಲ್ಲಿ ತೆಂತಗಿನ ಕಾಯಿ ದರ 100 ರೂಗಳಿಗೆ ತಲುಪುವ ಸಾಧ್ಯತೆಯಿದೆ ಎಂದು ತೆಂಗಿನ ಕಾಯಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪ್ರಸಕ್ತ ವರ್ಷ ತೆಂಗಿನ ಕಾಯಿ ಉತ್ಪಾದನೆಯಲ್ಲಿ ಶೇ 40 ರಷ್ಟು ಇಳಿಕೆಯಾಗಿದೆ. ತಾಪಮಾನದಲ್ಲಿ ಉಂಟಾಗಿರುವ ಹೆಚ್ಚಳವು ತೆಂಗಿನ ಕಾಯಿ ಉತ್ಪಾದನೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಇಷ್ಟೇ ಅಲ್ಲದೆಯೇ ಕೃಷಿ ಕದಷೇತ್ರಗಳಿಗೆ ಪ್ರಾಣಿಗಳ ಉಪದ್ರವ ಹೆಚ್ಚಾಗಿ ತೆಂಗಿನ ಕಾಯಿಯನ್ನು ತಿನ್ನುವುದರಿಂದ ತೆಂಗಿನ ಕಾಯಿ ಉತ್ಪಾದನೆ ಕಡಿಮೆಯಾಗಿದೆ ಎಂಬುದು ಬಹುತೇಕ ಕೃಷಿಕರ ಅಭಿಪ್ರಾಯವಾಗಿದೆ. ಇತ್ತ ಉತ್ಪಾದನೆಯ ಕೊರತೆ ಮತ್ತು ಬೇಡಿಕೆಯ ಹೆಚ್ಚಳ ಇವೆರಡೂ ತೆಂಗಿನ ಕಾಯಿ ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಕರ್ನಾಟಕದಿಂದ ಗೋವಾಕ್ಕೆ ತೆಂಗಿನ ಕಾಯಿ…
ಕರ್ನಾಟಕದ ವಿವಿಧ ಭಾಗಗಳಿಂದ ಗೋವಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೆಂತಗಿನ ಕಾಯಿ ಪೂರೈಕೆಯಾಗುತ್ತದೆ. ಪ್ರಮುಖವಾಗಿ ಉತ್ತರಕನ್ನಡ ಜಿಲ್ಲೆಯಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಗೋವಾಕ್ಕೆ ತೆಂಗಿನ ಕಾಯಿ ಪೂರೈಕೆಯಾಗುತ್ತದೆ. ಇದೀಗ ತೆಂಗಿನ ಕಾಯಿ ದರ ಹೆಚ್ಚಳವು ಗ್ರಾಹಕರಿಗೆ ಹೆಚ್ಚಿನ ತೊಂದರೆಯುಂಟಾಗುವಂತೆವ ಮಾಡಿದೆ.