ಸುದ್ದಿ ಕನ್ನಡ ವಾರ್ತೆ
ಗೋವಾದಲ್ಲಿ ಗಡಿ ಕನ್ನಡ ಭವನ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರದಿಂದ ಖಾಸಗಿ ನಿವೇಶನ ಖರೀದಿ-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ನಿವೇಶನ ಖರೀದಿ ಮಾಡಿದೆ.
ಶ್ರೀ ಸೋಮಣ್ಣ ಬೇವಿನಮರದ, ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಪ್ರಕಾಶ ಮತ್ತೀಹಳ್ಳಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವರ ಉಪಸ್ಥಿತಿಯಲ್ಲಿ ದಿನಾಂಕ:30-7-2025ರಂದು ಹೋಟೆಲ್ ಕೇಸರ್‌ವಾಲ್ ಗಾರ್ಡನ್, ಪಂಜಿಮ್ ರಾಷ್ಟ್ರೀಯ ಹೆದ್ದಾರಿ, ವರ್ನಾ ಜಂಕ್ಷನ್‌ರಲ್ಲಿ ಬೆಳಿಗ್ಗೆ 10-30 ಘಂಟೆಯಿಂದ ಸಭೆಯನ್ನು ಆಯೋಜಿಸಿದ್ದು, ಸದರಿ ಸಭೆಯಲ್ಲಿ ಶ್ರೀ ಸಿದ್ದಣ್ಣ ಮೇಟಿ, ಕನ್ನಡ ಸಾಹಿತ್ಯ ಪರಿಷತ್ತು ಗೋವಾ ಗಡಿನಾಡು ಘಟಕ, ಶ್ರೀ ಹನುಮಂತ ರೆಡ್ಡಿ ಶಿರೂರು, ಶ್ರೀ ತವರಪ್ಪ , ಶ್ರೀ ರಾಜೇಶ್ ಶೆಟ್ಟಿ, ಶ್ರೀ ತಡಿವಾಳ್ , ಶಿವಾನಂದ ಬಿಂಗಿ ಹಾಗೂ ಗೋವಾದಲ್ಲಿನ ಇತರೆ ಕನ್ನಡ ಪರ ಸಂಘ ಸಂಸ್ಥೆಗಳ ಅಧ್ಯಕ್ಷರು/ಸದಸ್ಯರುಗಳು ಭಾಗವಹಿಸಿದ್ದರು.
ಶ್ರೀ ಸೋಮಣ್ಣ ಬೇವಿನಮರದ, ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವರ ಮಾತನಾಡಿ , ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ನಿವೇಶನ ಸರ್ವೆ ನಂಬರ್ 113/9 11571.2 Sq.ft Ambarame Matta, Cortalim Village, Vasco-Mormugao Taluk, Goa ನ್ನುಖರೀದಿಸಿರುವ ಬಗ್ಗೆ ಈ ಕೆಳಕಂಡ ಅಂಶಗಳ ಬಗ್ಗೆ ಮಾಹಿತಿ ನೀಡಿದರು.
2022-23ನೇ ಸಾಲಿನ ಆಯವ್ಯಯದಲ್ಲಿ “ಗೋವಾದಲ್ಲಿ ಕನ್ನಡ ಭವನ” ನಿರ್ಮಾಣ ಮಾಡುವ ಯೋಜನೆ ಘೋಷಣೆಯಾಗಿತ್ತು.
ಸುಮಾರು 6 ಲಕ್ಷದಷ್ಟು ಇರುವ ಕನ್ನಡಿಗರಿಗಾಗಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಅನುಷ್ಠಾನಕ್ಕಾಗಿ ಕಳೆದ ನಲವತ್ತು ವರ್ಷಗಳಿಂದ ಗೋವಾ ಕನ್ನಡಿಗರು ಮನವಿ ಸಲ್ಲಿಸುತ್ತಾ ಬಂದಿದ್ದರು.
ನಿವೇಶನ ಪಡೆಯುವ ಬಗ್ಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ತೆಗೆದುಕೊಂಡಿರುವ ಕ್ರಮಗಳ ವಿವರಗಳ ಈ ಕೆಳಕಂಡಂತಿರುತ್ತದೆ.
1. 2022-23 ರ ಬಜೆಟ್‌ನಲ್ಲಿ ಸದರಿ ಯೋಜನೆ ಘೋಷಣೆಯಾಗುವುದಕ್ಕೂ ಮುನ್ನ ಅಖಿಲ ಗೋವಾ ಕನ್ನಡ ಮಹಾ ಸಂಘ ಇವರ ಮನವಿಯ ಮೇಲೆ ಮಾನ್ಯ ಮುಖ್ಯಮಂತ್ರಿಗಳಸೂಚನೆ ಮೇರೆ ದಿನಾಂಕ: 12-12-2021 ರಂದು ಗೋವಾಕ್ಕೆ ಭೇಟಿ ಮಾಡಿ ಅಲ್ಲಿನ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳ ಜೊತೆ ಚರ್ಚಿಸಲಾಯಿತು.
2. ಮೇ|| ಜುವ್ಹಾರಿ ಆಗ್ರೋ ಕೆಮಿಕಲ್ ಲಿ. ಗೋವಾ, ಇವರ ಒಡೆತನದಲ್ಲಿರುವ ಖಾಸಗಿ ನಿವೇಶನವನ್ನು ಪಡೆದುಕೊಳ್ಳಲು ಪ್ರಯತ್ನಿಸಿ ದಿನಾಂಕ: 20-12-2021 ರಂದು ಮಾನ್ಯ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ನವದೆಹಲಿ ರವರಿಗೆ ಪತ್ರ ಬರೆಯಲಾಯಿತು.
3.ಹಿಂದಿನ ಸನ್ಮಾನ್ಯ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ಮೇ||ಗೋವಾದ ಜುವ್ಹಾರಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ದಿನಾಂಕ: 3-1-2022 ರಂದು ಪತ್ರ ಬರೆದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಇಂತಹ ಪ್ರತಿಷ್ಠಿತ ಯೋಜನೆಗೆ ಕೈಗಾರಿಕೆಗಳ ಸಿಎಸ್‌ಆರ್ ನಿಧಿಯ ವ್ಯಾಪ್ತಿಯಲ್ಲಿ ಉಚಿತವಾಗಿ ಕನಿಷ್ಠ 5 ಎಕರೆ ಜಾಗವನ್ನು ಒದಗಿಸಿ ಎರಡೂ ರಾಜ್ಯಗಳ ಭಾಂಧವ್ಯಗಳಿಗೆ ಪ್ರೋತ್ಸಾಹ ನೀಡಲು ಕೋರಿರುತ್ತಾರೆ.
4. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸೂಕ್ತವಾದ ಸರ್ಕಾರಿ ನಿವೇಶನವನ್ನು ಒದಗಿಸಲು ಕೋರಿ, ಗಡಿ ಪ್ರಾಧಿಕಾರದಿಂದ ಜಿಲ್ಲಾಧಿಕಾರಿಗಳು, ದಕ್ಷಿಣ ಗೋವಾ ಇವರಿಗೂ ಸಹಾ ದಿನಾಂಕ: 10-12-2021 ರಂದು ಪತ್ರ ಬರೆಯಲಾಗಿರುತ್ತದೆ.
5. ಇದಕ್ಕೆ ಪೂರಕವಾಗಿ ದಕ್ಷಿಣ ಗೋವಾದ ಜಿಲ್ಲಾ ಕಲೆಕ್ಟರ್‌ರವರು ದಿನಾಂಕ:6-1-2022 ರಂದು ದಕ್ಷಿಣ ಗೋವಾದ ಎಲ್ಲಾ ತಹಶೀಲ್ದಾರರುಗಳಿಗೆ ಪತ್ರ ಬರೆದು ನಮೂನೆ 1 & 14, ರ ನಮೂನೆಯಲ್ಲಿ ಅಗತ್ಯವಾದ ನಿವೇಶನಗಳನ್ನು ಗುರುತಿಸಿ, ಖರೀದಿ ಮೊತ್ತ, ನಕಾಶೆ ಇತ್ಯಾದಿಗಳ ವಿವರಗಳನ್ನು ಸಲ್ಲಿಸುವಂತೆ ಕೋರಿರುತ್ತಾರೆ. ಆದರೆ ನಂತರ ಇದರಿಂದ ಯಾವುದೇ ಪ್ರಗತಿಯಾಗಿರುವುದಿಲ್ಲ ಹಾಗೂ ಅನೇಕ ಬಾರಿ ಜಿಲ್ಲಾ ಕಲೆಕ್ಟರ್ ಮತ್ತು ತಹಶೀಲ್ದಾರರನ್ನು ಇವರನ್ನು ಖುದ್ದಾಗಿ ಸಂಪರ್ಕಿಸಿದರೂ ಕೂಡಾ ಸರ್ಕಾರಿ ಜಾಗ ಲಭ್ಯವಿಲ್ಲವಾಗಿರುವುದಾಗಿ ಮೌಖಿಕವಾಗಿ ತಿಳಿಸಿರುತ್ತಾರೆ. ಯಾವುದೇ ಹಿಂಬರಹ ನೀಡಿರುವುದಿಲ್ಲ.
6. ಮೇ||ಜುವ್ಹಾರಿ ಕೆಮಿಕಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರವರನ್ನು ಗಡಿ ಪ್ರಾಧಿಕಾರದ ಅಧ್ಯಕ್ಷರು & ಕಾರ್ಯದರ್ಶಿಯವರು ಖುದ್ದಾಗಿ ಭೇಟಿ ಮಾಡಿದಾಗ ಕೆಲವು ತಾಂತ್ರಿಕ ಹಾಗೂ ಕಾನೂನಾತಾತ್ಮಕ ಅಡಚಣೆಗಳಿರುವುದರಿಂದ ಪ್ರಸ್ತುತ ಹಂತದಲ್ಲಿ ನಿವೇಶನ ಖರೀದಿಗೆ ನೀಡಲು ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲವಾಗಿ ತಿಳಿಸಿದರು.
7. ಬಜೆಟ್ ಘೋಷಣೆಯಾದ ನಂತರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ದಿನಾಂಕ:18-5-2022ರಂದು ಜಿಲ್ಲಾ ಕಲೆಕ್ಟರ್, ದಕ್ಷಿಣ ಗೋವಾ ಇವರಿಗೆ ಪತ್ರ ಬರೆದು ಮಾರುಕಟ್ಟೆ ಬೆಲೆಯಲ್ಲಿ ಜಾಗವನ್ನು ಖರೀದಿಸಲು ಸಾಧ್ಯವಾಗದ ಕಾರಣ ಕನಿಷ್ಠ ಎರಡು ಎಕರೆ ಸರ್ಕಾರಿ ಜಾಗವನ್ನು ಉಚಿತವಾಗಿ ಒದಗಿಸಲು ಕೋರಲಾಗಿತ್ತು. ಆದಾಗ್ಯೂ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿರುವುದಿಲ್ಲ
8. ದಿನಾಂಕ:20-9-2022ರಂದು ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಗೋವಾದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕನ್ನಡ ಭವನ ನಿರ್ಮಾಣ ಸಂಬಂಧ 1 ಎಕರೆ ಜಮೀನನ್ನು ಉಚಿತವಾಗಿ ನೀಡುವಂತೆ ಸಹಾ ಕೋರಿರುತ್ತಾರೆ.
9. ಆದರೆ, ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿಗಳ ಪತ್ರಕ್ಕೆ ಉತ್ತರವಾಗಿ ದಿನಾಂಕ:11.11.2022 ರಂದು ಗೋವಾದ ಮುಖ್ಯಮಂತ್ರಿಗಳು, ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ಲಭ್ಯವಿಲ್ಲದೆ ಇರುವುದರಿಂದ ನಿವೇಶನ ನೀಡಲು ಸಾಧ್ಯವಿಲ್ಲ ಆದರೆ, ಖಾಸಗಿ ಜಮೀನು ಖರೀದಿಸಿ ಕರ್ನಾಟಕ ಸರ್ಕಾರವು ಕನ್ನಡ ಭವನ ನಿರ್ಮಾಣ ಮಾಡಿದಲ್ಲಿ ಎಲ್ಲಾ ಸಹಕಾರ ನೀಡುವುದಾಗಿ ಗೋವಾದಲ್ಲಿನ ಒಂದು ಕನ್ನಡ ಸಂಸ್ಥೆಯ ಸಾಂಸ್ಕೃತಿಕ ಸಭಾ ಕಾರ್ಯಕ್ರಮದಲ್ಲಿ ಖುದ್ದಾಗಿ ಹೇಳಿಕೆ ನೀಡಿರುತ್ತಾರೆ.
10. ಗಡಿ ಪ್ರಾಧಿಕಾರ ಕಳೆದ ಎರಡು ವರ್ಷದಿಂದ ಗೋವಾ ಸರ್ಕಾರಕ್ಕೆ ಮನವಿ ಮಾಡಿ ನಿವೇಶನ ಪಡೆಯಲು ಮೇಲ್ಕಂಡಂತೆ ತಿಳಿಸಿರುವಂತೆ ಪ್ರಯತ್ನಿಸಿದಾಗ್ಯೂ ಕೂಡಾ ನಿವೇಶನ ದೊರಯದೇ ಇರುವುದರಿಂದ 2022-23ನೇ ಸಾಲಿನ ಆಯವ್ಯಯ ಘೋಷಣೆ ಅನ್ವಯ ಖಾಸಗಿ ನಿವೇಶನ ಖರೀದಿ ಮಾಡುವುದು ಅನಿವಾರ್ಯವಾಯಿತು.
11. ಪ್ರಸ್ತುತ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರು ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಸಂಬಂಧ ನಿವೇಶನ ಖರೀದಿಸಲು ಒಪ್ಪಿ, ಗೋವಾದ ಕನ್ನಡಿಗರು ಸೂಚಿಸಿದ ಹಾಗೂ ಕನ್ನಡಿಗರು ಇರುವಂತ ಸ್ಥಳದಲ್ಲಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅನುದಾನ ಒದಗಿಸಿರುವ ಹಿನ್ನಲೆಯಲ್ಲಿ ಗೋವಾದ ಮಡಗಾಂವ್ -ಪಂಜಿಮ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಖಾಸಗಿ ನಿವೇಶನ ಸರ್ವೆ ನಂಬರ್ 113/9 11571.2 Sq.ft Ambarame Matta, Cortalim Village, Vasco-Mormugao Taluk, Goa ನ್ನು ಖರೀದಿಸಿ, , ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ ದ ಹೆಸರಿನಲ್ಲಿ ನೊಂದಣಿ ಮಾಡಲಾಗಿರುತ್ತದೆ
12. ಸದರಿ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣ ಸಂಬಂಧ ಅಂದಾಜು ಪಟ್ಟಿ ರೂಪರೇಷೆಗಳನ್ನುತಯಾರಿಸಲು ಹಾಗೂ ಕನ್ನಡ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂಬುದಾಗಿ ತಿಳಿಸಿದರು.
1. ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಕಾರ್ಯವನ್ನು ಖಾಸಗಿ ಇಂಜಿನಿಯರುಗಳ ಮೂಲಕ ಅಂದಾಜು ಪಟ್ಟಿ ನೀಲನಕ್ಷೆಗಳನ್ನು ತಯಾರಿಸಲು ನಿರ್ಣಯಿಸಲಾಯಿತು.
2. ಬೇಸ್‌ಮೆಂಟ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ, ನೆಲಮಹಡಿಯಲ್ಲಿ ಸಂಪೂರ್ಣ ಕಮರ್ಷಿಯಲ್ ಕಾಂಪ್ಲೆಕ್ಸ್ ಮಾಡಿ ಬಾಡಿಗೆಗೆ ಒದಗಿಸುವುದು ಹಾಗೂ ಬರುವ ಮಾಸಿಕ ಬಾಡಿಗೆಯನ್ನು ಕನ್ನಡ ಭವನದ ನಿರ್ವಹಣೆಗೆ ಬಳಸುವುದು. ಒಂದನೇ ಮಹಡಿಯಲ್ಲಿ ಭೋಜನಾಲಯ ಹಾಗೂ ಗ್ರಂಥಾಲಯ ನಿರ್ಮಿಸುವುದು. ಎರಡನೇ ಮಹಡಿಯಲ್ಲಿ ಒಂದು ಸಾವಿರ ಜನರು ಕನ್ನಡ ಭವನ ಕುಳಿತುಕೊಳ್ಳಲು ಸಾಮರ್ಥ್ಯವಿರುವ ಸಾಂಸ್ಕೃತಿಕ ಭವನ ಮೂರನೇ ಮಹಡಿಯಲ್ಲಿ ಕನ್ನಡಿಗರಿಗಾಗಿ 10 ರಿಂದ15 VIP ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು ಸಭೆಯಲ್ಲಿದ್ದ ಗೋವಾ ಕನ್ನಡ ಸಂಘಟನೆಗಳು ಮನವಿ ಮಾಡಿದರು .
ಸಭೆಯಲ್ಲಿ ಹಾಜರಿದ್ದ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳು ಒಟ್ಟಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ರಸ್ತುತ ಖರೀದಿಸಿರುವ ನಿವೇಶನಕ್ಕೆ ತಾತ್ಕಲಿಕವಾಗಿ ಆವರಣಗೋಡೆಯನ್ನು ನಿರ್ಮಿಸಿ ಕೊಡುವುದಾಗಿ ತಿಳಿಸಿದರು ಹಾಗೂ ಕನ್ನಡ ಭವನ ನಿರ್ಮಾಣಕ್ಕಾಗಿ ಗೋವಾದಲ್ಲಿ ನಿವೇಶನ ಖರೀದಿಸಿರುವುದಕ್ಕಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಹಾಗೂ ಉಪಮುಖ್ಯಮಂತ್ರಿಗಳಿಗೆ ಆಭಾರಿಯಾಗಿರುವುದಾಗಿ ತಿಳಿಸಿದರು ಹಾಗೂ ಕನ್ನಡ ಭವನ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಲು ಅನುದಾನ ಒದಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿ ಕಾಮಗಾರಿಯನ್ನು ಪ್ರಾರಂಭಿಸಲು ಆಗ್ರಹಿಸಿದರು. ನಂತರ, ಗೋವಾದ ಕನ್ನಡಿಗರ ಸಮಸ್ಯೆಗಳ ಬಗ್ಗೆಯು ಚರ್ಚೆ ನಡೆಸಲಾಯಿತು.
ಕಟ್ಟಡ ನಿರ್ಮಾಣಕ್ಕಾಗಿ ಹೆಚ್ಚುವರಿ ಅನುದಾನವನ್ನು ಒದಗಿಸಲು ಸರ್ಕಾರಕ್ಕೆ ಪತ್ರ ಬರೆದು ಮುಂದಿನ ಕ್ರಮ ವಹಿಸಲು ತೀರ್ಮಾನಿಸಲಾಯಿತು.