ಸುದ್ಧಿಕನ್ನಡ ವಾರ್ತೆ
ಗೋವಾ-ಮುಂಬಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಣಿ ಪೇಠ ಬಳಿ ಎಲ್ ಪಿಜಿ ಗ್ಯಾಸ್ ಟ್ಯಾಂಕರ್ ಸೇತುವೆಯಿಂದ ಕೆಳಕ್ಕೆ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಟ್ಯಾಂಕರ್ ನಿಂದ ಭಾರಿ ಪ್ರಮಾಣದ ಗ್ಯಾಸ್ ಸೋರಿಕೆಯಾಗಲು ಆರಂಭಿಸಿದ್ದರಿಂದ ಈ ಮಾರ್ಗದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ. ಈ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್ ಆಗಿದೆ.

ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಪೋಲಿಸ್ ತಂಡ ದಾಖಲಾಗಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ. ಗ್ಯಾಸ್ ಸೋರಿಕೆಯಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಸುಮಾರು 10 ತಾಸಿನಿಂದ ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯವುಂಟಾಗಿದೆ. ಭಾರಿ ವಾಹನಗಳನ್ನು ಕಿಲೋಮೀಟರ್ ಗಟ್ಟಲೇ ನಿಂತಿವೆ. ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ.

ಸಣ್ಣಪುಟ್ಟ ವಾಹನಗಳನ್ನು ಬದಲಿ ಮಾರ್ಗ ಬಾಬನದಿ-ಪಾಲಿ ಮಾರ್ಗದ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಭಾರಿ ವಾಹನಗಳಿಗೆ ಯಾವುದೇ ಬದಲಿ ಮಾರ್ಗದ ವ್ಯವಸ್ಥೆಯಿಲ್ಲದೆಯೇ ಪರದಾಡುವಂತಾಗಿದೆ. ಟ್ಯಾಂಕರ್ ಮೇಲೆತ್ತುವ ಕಾರ್ಯವೂ ಕೂಡ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.