ಸುದ್ಧಿಕನ್ನಡ ವಾರ್ತೆ
ಒಂದು ಕಾಲವಿತ್ತು…ಅಂದು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕನ್ನಡಿಗರು ಗೋವಾ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಗೋವಾ ಸರ್ಕಾರ ಯಾವುದೇ ಸಕಾರಾತ್ಮಕವಾಗಿ ಸ್ಫಂಧಿಸುತ್ತಿರಲಿಲ್ಲ. ಆದರೆ ಇದೀಗ ಕಾಲ ಬದಲಾಗಿದೆ. ಕರ್ನಾಟಕ ಸರ್ಕಾರವು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಿದ್ದು ಶೀಘ್ರವೇ ಅಡಿಗಲ್ಲಿ ಸಮಾರಂಭ ನಡೆಯಲಿದೆ. ಈ ಮೂಲಕ ಗೋವಾ ಕನ್ನಡಿಗರ ಕನಸು ನನಸಾಗುತ್ತಿದೆ.

ಗೋವಾದಲ್ಲಿ ನಿವೇಶನ ಖರೀದಿ…
ಕಳೆದ ಅನೇಕ ವರ್ಷಗಳಿಂದ ಗೋವಾದಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಕೆಲವು ಕನ್ನಡಿಗರ ಕುಟುಂಬಗಳಂತೂ ಎರಡು ಮೂರು ತಲೆಮಾರು ಗೋವಾದಲ್ಲಿ ಕಳೆದಿದ್ದಾರೆ. ಗೋವಾದಲ್ಲಿ ಸರಿಸುಮಾರು 4 ಲಕ್ಷ ಕನ್ನಡಿಗರು ನೆಲೆಸಿದ್ದಾರೆ. ಆದರೆ ಈ ಕನ್ನಡಿಗರಿಗೆ ಒಂದೆಡೆ ಸೇರಲು ಗೋವಾದಲ್ಲಿ ಸ್ವಂತ ಸ್ಥಳವಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು ಗೋವಾದ ವಿವಿಧ ಕನ್ನಡ ಸಂಘಟನೆಗಳು ಸಂಕಲ್ಪಿಸಿ ಗೋವಾ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಬಳಿ ಮನವಿ ಮಾಡುತ್ತಲೇ ಬಂದಿದ್ದರು. ಗೋವಾದಲ್ಲಿ ಕನ್ನಡಿಗರ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಅಲ್ಲಿ ಕನ್ನಡ ಭವನದ ವಿಷಯ ಚರ್ಚೆಗೆ ಬರುತ್ತಿತ್ತು. ಹೀಗೆ ಸತತ ಹೋರಾಟಕ್ಕೆ ಇಂದು ಫಲ ಸಿಕ್ಕಿಯೇ ಬಿಟ್ಟಿತು. ಕರ್ನಾಟಕ ಸರ್ಕಾರವು ಇದೀಗ ಗೋವಾದ ವೆರ್ಣಾ ಇಂಡಸ್ಟ್ರಿ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಡೇ ಇರುವ ನಿವೇಶನ ಖರೀದಿಸಿ ಗೋವಾ ಕನ್ನಡಿಗರ ಕನಸು ನನಸಾಗಿಸಿದೆ.

ಯಾವುದೇ ಸ್ವಂತ ಸ್ಥಳವಿರಲಿಲ್ಲ..
ಗೋವಾದಲ್ಲಿ ಸುಮಾರು 25 ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳಿವೆ. ಈ ಎಲ್ಲ ಕನ್ನಡ ಸಂಘಟನೆಗಳು ತಮ್ಮ ಸಂಘದ ಯಾವುದೇ ಕಾರ್ಯಕ್ರಮ ನಡೆಸಲು ಗೋವಾದಲ್ಲಿನ ಸರ್ಕಾರ ಅಥವಾ ಇತರ ಖಾಸಗಿ ಸಭಾಭವನ ಬಾಡಿಗೆಗೆ ಪಡೆದುಕೊಳ್ಳಬೇಕಿತ್ತು. ಒಂದು ಸಭೆ ಸೇರಲು ಕೂಡ ಗೋವಾದ ಕನ್ನಡ ಸಂಘಟನೆಗಳಿಗೆ ಸ್ವಂತ ಜಾಗವಿರಲಿಲ್ಲ. ಎಲ್ಲಿಯೋ ಹೋಟೆಲ್ ಗಳಲ್ಲೋ ಅಥವಾ ಪಾರ್ಕಗಳಲ್ಲೊ ಕನ್ನಡಿಗರು ಒಂದೆಡೆ ಸೇರಿ ಸಭೆ ನಡೆಸಿದ ಅದೆಷ್ಟೋ ಉದಾಹರಣೆಗಳಿವೆ. ಕೆಲವೊಂದು ಸಭಾಭವನದಲ್ಲಂತೂ ಹೊರ ಭಾಗದಲ್ಲಿ ಹೆಚ್ಚಾಗಿ ಕನ್ನಡ ಬಾವುಟ ಹಾರಿಸಲು ಕೂಡ ಸ್ವಾತಂತ್ರ್ಯ ವಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಗೋವಾದಲ್ಲಿ ಕನ್ನಡಿಗರಿಗೆ ಸ್ವಂತ ವೇದಿಕೆ ನಿರ್ಮಾಣಗೊಳ್ಳುತ್ತಿದೆ.

ಕನ್ನಡ ಭವನ ಕನ್ನಡಿಗರ ಭವನವಾಗಲಿ….
ಕರ್ನಾಟಕ ಸರ್ಕಾರವು ಗೋವಾದ ವೆರ್ಣಾದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೆ ಇರುವ ನಿವೇಶನ ಖರೀದಿಸಿದೆ. ಇದರಿಂದಾಗಿ ಮುಂದೆ ಇಲ್ಲಿ ಕನ್ನಡ ಭವನ ನಿರ್ಮಾಣವಾದ ನಂತರವೂ ಕೂಡ ಗೋವಾದ ಯಾವುದೇ ಭಾಗದಿಂದ ಬಂದು ಹೋಗುವ ಕನ್ನಡಿಗರಿಗೆ ಸಹಜವಾಗಿಯೇ ಸಾರಿಗೆ ಸೌಲಭ್ಯ ಇರಲಿದೆ. ಇದರಿಂದಾಗಿ ಹೆಚ್ಚು ಅನುಕೂಲಕರ ಸ್ಥಳವಾಗಿದೆ. ಗೋವಾ ಕನ್ನಡ ಭವನವು ಕನ್ನಡಿಗರ ಭವನವಾಗಿ ಉಳಿಯಬೇಕು. ಗೋವಾದಲ್ಲಿ ಎಲ್ಲ ಕನ್ನಡಿಗರಿಗೂ ಇದು ನಮ್ಮ ಭವನ ಎಂಬ ಭಾವನೆ ಉಳಿದುಕೊಳ್ಳುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಅಗತ್ಯ ಎಲ್ಲ ಪ್ರಕ್ರಿಯೆಗಳನ್ನು ನಡೆಸಬೇಕಿದ್ದು, ಇಂತದಹದ್ದೊಂದು ದೊಡ್ಡ ಜವಾಬ್ದಾರಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮೇಲಿದೆ. ಗೋವಾದಲ್ಲಿ ಕನ್ನಡಿಗರ ಮತ್ತು ಕನ್ನಡ ಸಂಘಟನೆಗಳ ಯಾವುದೇ ಕಾರ್ಯಕ್ರಮವನ್ನು ಕನ್ನಡ ಭವನದಲ್ಲಿಯೇ ನಡೆಸುವಂತಹ ವಾತಾವರಣವನ್ನೂ ಸೃಷ್ಠಿಸಬೇಕಿದೆ.

ಕನ್ನಡ ಭವನಕ್ಕೆ ಸಂಪರ್ಕ ಸೌಲಭ್ಯ…
ಸದ್ಯ ಗೋವಾದ ವೆರ್ಣಾದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಿದೆ. ಈ ಸ್ಥಳವು ಎಲ್ಕೆಡೆಯಿಂದಲೂ ಉತ್ತಮ ಸಂಪರ್ಕ ಇರುವ ಮುಖ್ಯ ಸ್ಥಳವಾಗಿದೆ. ವೆರ್ಣಾದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಈ ಜಾಗವಿದೆ. ಈ ಸ್ಥಳದಿಂದ ವಾಸ್ಕೋ ರೈಲ್ವೆ ನಿಲ್ದಾಣ ಮತ್ತು ವೆರ್ಣಾ ರೈಲ್ವೆ ನಿಲ್ದಾಣ ಕೂಡ ಅತ್ಯಂತ ಸಮೀಪದಲ್ಲಿದೆ. ದಾಬೋಲಿಂ ವಿಮಾನ ನಿಲ್ದಾಣವಂತೂ ತೀರಾ ಹತ್ತಿರದಲ್ಲಿದೆ. ಹಗಲಿರುಳೆನ್ನದೆಯೇ ಬಸ್ ಓಡಾಟ ನಡೆಸುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ಈ ಜಾಗವಿದೆ. ಗೋವಾ ರಾಜಧಾನಿ ಪಣಜಿಯಿಂದ 6ವೇ ಸಂಪರ್ಕವಿದ್ದು, ಸುಮಾರು 15 ಕಿಮಿ ದೂರದಲ್ಲಿದೆ. ಇದರಿಂದಾಗಿ ಕನ್ನಡ ಭವನದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಯಾವುದೇ ಭಾಗದಿಂದ ಆಗಮಿಸುವ ಕನ್ನಡಿಗರಿಗೆ ಬಂದು ಹೋಗಲು ಹೆಚ್ಚು ಅನುಕೂಲಕರವಾಗಲಿದೆ.

ಕನ್ನಡಿಗರಲ್ಲಿ ಒಗ್ಗಟ್ಟು ಅಗತ್ಯ…
ಗೋವಾ ಕನ್ನಡಿಗರ ಬಹು ವರ್ಷಗಳ ಕನಸು ಇಂದು ನನಸಾಗುತ್ತಿದೆ. ಗೋವಾದಲ್ಲಿ ಕನ್ನಡ ಭವನಕ್ಕೆ ಕರ್ನಾಟಕ ಸರ್ಕಾರ ನಿವೇಶನ ಖರೀದಿಸಿದೆ. ಗೋವಾದಲ್ಲಿ ನಿರ್ಮಾಣಗೊಳ್ಳುವ ಕನ್ನಡ ಭವನವು ಎಲ್ಲ ಕನ್ನಡಿಗರಿಗೆ ಹಾಗೂ ಕನ್ನಡ ಸಂಘಟನೆಗಳಿಗೆ ಸದುಪಯೋಗವಾಗಬೇಕಾದರೆ ಕನ್ನಡರಲ್ಲಿ ಹಾಗೂ ಕನ್ನಡ ಸಂಘಟನೆಗಳಲ್ಲಿ ಒಗ್ಗಟ್ಟು ಅಗತ್ಯವಿದೆ. ಎಲ್ಲ ಕನ್ನಡಿಗರು ಒಗ್ಗಟ್ಟಾದರೆ ಗೋವಾ ಕನ್ನಡ ಭವನವು ನಮ್ಮೆಲ್ಲರ ಭವನವಾಗಲಿದೆ.