ಸುದ್ಧಿಕನ್ನಡ ವಾರ್ತೆ
ಗೋವಾದ ಪ್ರಸಿದ್ಧ ಕೋಲ್ವಾ ಬೀಚ್ ನಲ್ಲಿ ಪ್ರವಾಸಿಗರು ಪೋಲಿಸರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ 5 ಜನ ಪ್ರವಾಸಿಗರನ್ನು ಪೋಲಿಸರು ಬಂಧಿಸಿದ್ದಾರೆ. ಹವಾಮಾನ ವೈಪರಿತ್ಯದ ಸಂದರ್ಭದಲ್ಲಿ ಸಮುದ್ರಕ್ಕಿಳಿಯಲು ನಿರ್ಬಂಧವಿರುವಾಗಲೂ ನಿಯಮವನ್ನು ಉಲ್ಲಂಘಿಸಿ ಈ ಪ್ರವಾಸಿಗರು ಸಮುದ್ರಕ್ಕಿಳಿಯುವ ಪ್ರಯತ್ನ ನಡೆಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮಡಗಾಂವ ಕೋಲ್ವಾ ಬೀಚ್ ನಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯುವುದು ಅಸುರಕ್ಷಿತ ಎಂದ ಘೋಷಿಸಲಾಗಿದೆ. ಜೀವರಕ್ಷಕ ದಳದ ಸಿಬ್ಬಂಧಿಗಳು ಪದೆಪದೆ ಸುರಕ್ಷತೆಯ ಬಗ್ಗೆ ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಿದ್ದರೂ ಕೂಡ ತಮಿಳುನಾಡಿನ ಪ್ರವಾಸಿಗರ ಗುಂಪು ಸಮುದ್ರಕ್ಕಿಳಿಯಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಡ್ಯೂಟಿಯಲ್ಲಿದ್ದ ಪೋಲಿಸರು ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಆ ಪ್ರವಾಸಿಗರ ಪೈಕಿ ಒಬ್ಬ ವ್ಯಕ್ತಿ ಪೋಲಿಸ್ ಅಧಿಕಾರಿಯ ಕಾಲರ್ ಹಿಡಿದು ಹಲ್ಲೆ ನಡೆಸಿದ ಎನ್ನಲಾಗಿದೆ. ಈ ಗಲಾಟೆ ನಿಲ್ಲಲಿಲ್ಲ. ಇತರ ನಾಲ್ಕೂ ಪ್ರವಾಸಿಗರು ಈ ಗಲಾಟೆಯಲ್ಲಿ ಭಾಗಿಯಾದರು.
ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಕೂಡಲೇ ಕಾರ್ಯಾಚರಣೆ ನಡೆಸಿ ಈ ಐದೂ ಜನ ಪ್ರವಾಸಿಗರನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಭಾರತೀಯ ದಂಡಸಂಹಿತೆ ಖಾಯ್ದೆ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನದ ಪೋಲಿಸ್ ಕಸ್ಟಡಿ ಜಾರಿಗೊಳಿಸಲಾಗಿದೆ.

ಗೋವಾ ಪೋಲಿಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳಿರುತ್ತವೆ. ಪ್ರವಾಸಿಗರ ಸುರಕ್ಷತೆಗೆ ಪ್ರಾಧಾನ್ಯತೆ ನೀಡಲಾಗುವುದು. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.