ಸುದ್ದಿ ಕನ್ನಡ ವಾರ್ತೆ
ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಅಡಿಕೆ ಬೆಳೆಗಾರರಿಗೆ ದೊರೆಯಬೇಕಾಗಿದ್ದ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಒದಗಿಸಿದ್ದಕ್ಕಾಗಿ ಅಡಿಕೆ ಬೆಳೆಗಾರರ ಪರವಾಗಿ ಅಭಿನಂದಿಸಿದರು.
ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕೂಲಂಕಷವಾಗಿ ಚರ್ಚಿಸಲು ಮತ್ತು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಕರ್ನಾಟಕ ರಾಜ್ಯದ ಅಡಿಕೆ ಬೆಳೆಯುವ ಪ್ರದೇಶಗಳ ಸಂಸದರು ಮತ್ತು ಅಡಿಕೆ ಬೆಳೆಗಾರರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಒಂದು ಮಹತ್ವದ ಸಭೆಯನ್ನು ಆಯೋಜಿಸುವಂತೆ ಸಚಿವರಲ್ಲಿ ಇದೇ ವೇಳೆ ಕಾಗೇರಿ ವಿನಂತಿ ಮಾಡಿದರು.
ಕರ್ನಾಟಕ ಸರ್ಕಾರದ ಮಳೆ ಮಾಪನ ಯಂತ್ರಗಳ ನಿರ್ವಹಣೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದರು, ಮಳೆ ಮಾಪನ ಯಂತ್ರಗಳ ಸಮರ್ಪಕ ಕಾರ್ಯನಿರ್ವಹಣೆ ಹವಾಮಾನ ಆಧಾರಿತ ಬೆಳೆ ವಿಮೆಯಂತಹ ಯೋಜನೆಗಳ ಯಶಸ್ಸಿಗೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವು ರಾಜ್ಯದಲ್ಲಿನ ಮಳೆ ಮಾಪನ ವ್ಯವಸ್ಥೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ. ಈ ಬಗ್ಗೆ ರಾಜ್ಯಕ್ಕೆ ಸೂಚನೆ ಇನ್ನೊಮ್ಮೆ ನೀಡುವಂತೆ ಒತ್ತಾಯಿಸಿದರು.