ಸುದ್ಧಿಕನ್ನಡ ವಾರ್ತೆ
ದೆಹಲಿಯಿಂದ ಗೋವಾಕ್ಕೆ ಬರುತ್ತಿದ್ದ ಇಂಡಿಗೊ ವಿಮಾನ ಮುಂಬಯಿಯಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಿದ್ದ ಘಟನೆ ನಡೆದ ಕೇವಲ ಒಂದೇ ವಾರದಲ್ಲಿ ಇದೀಗ ಗೋವಾದಿಂದ ಇಂದೋರ್ ಗೆ ತೆರಳುತ್ತಿದ್ದ ಇಂಡಿಗೊ ವಿಮಾನವನ್ನು ಎಮರ್ಜನ್ಸಿ ಲ್ಯಾಂಡಿಂಗ್ ಮಾಡಿರುವ ಘಟನೆ ನಡೆದಿದೆ. ಈ ವಿಮಾನವನ್ನು ಇಂದೋರ್ ನಲ್ಲಿ ಲ್ಯಾಂಡಿಂಗ್ ಮಾಡುವ ಮುನ್ನ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಎಮರ್ಜನ್ಸಿ ಸಂದೇಶ ಕಳುಹಿಸಲಾಗಿತ್ತು. ಈ ವಿಮಾನದಲ್ಲಿ 140 ಪ್ರಯಾಣಿಕರಿದ್ದರು. ಸೋಮವಾರ ಗೋವಾದಿಂದ ಇಂದೋರ್ ಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾದ ಮಾಹಿತಿಯ ಆನುಸಾರ- ಇಂಡಿಗೊ ವಿಮಾನ (6ಇ813) ಗೋವಾದ ದಾಬೋಲಿಂ ವಿಮಾನ ನಿಲ್ದಾಣದಿಂದ ಇಂದೋರ್ ಗೆ ಪ್ರಯಾಣ ಬೆಳೆಸಿತ್ತು. ವಿಮಾನವು ಇಂದೋರ್ ತಲುಪುತ್ತಿದ್ದಂತೆಯೇ ಲ್ಯಾಂಡಿಂಗ್ ಮಾಡುವ ಮುನ್ನ ವಿಮಾನದಲ್ಲಿ ಹೈಡ್ರೋಲಿಕ್ ಸಿಸ್ಟಮ್ ಕೆಲಸ ಮಾಡುತ್ತಿಲ್ಲ ಎಂಬುದು ಪೈಲಟ್ ಗಮನಕ್ಕೆ ಬಂತು. ಪೈಲಟ್ ಕೂಡಲೇ ಏರ್ ಟ್ರಾಫಿಕ್ ಕಂಟ್ರೋಲ್ ಎಮರ್ಜನ್ಸಿ ಸಂದೇಶ ಕಳುಹಿಸಿದ್ದಾನೆ. ಕೂಡಲೇ ಇಂದೋರ್ ವಿಮಾನ ನಿಲ್ದಾಣದ ರನ್ ವೆ ಬಳಿ ಅಂಬುಲೆನ್ಸ ಮತ್ತು ಅಗ್ನಿಶಾಮಕ ದಳವನ್ನು ಸಜದಜುಗೊಳಿಸಲಾಯಿತು. ರಕ್ಷಣಾ ತಂಡ ಕೂಡ ಸಜ್ಜಾಗಿದ್ದರು. ನಂತರ ಸೋಮವಾರ ಸಂಜೆ 5 ಗಂಟೆಗೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.

ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಗಾಬರಿಗೊಂಡಿದ್ದರು. ಕೊನೆಗೂ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿರುವುದರು ಪ್ರವಾಸಿಗರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಕೆಲ ದಿನಗಳಿಂದ ವಿಮಾನದಲ್ಲಿ ತಾಂತ್ರಿಕ ದೋಷ ಘಟನೆ ಮರುಕಳಿಸುತ್ತಿರುವುದು ವಿಮಾನ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಠಿಸಿದೆ.

ವಿಮಾನದಲ್ಲಿ ತಾಂತ್ರಿಕ ದೋಷವುಂಟಾಗಿರುವುದನ್ನು ಇಂಡಿಗೊ ವಿಮಾನ ಕಂಪನಿಯು ಕೂಡ ಖಚಿತಪಡಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳುವುದು ಮಾತ್ರವಲ್ಲದೆಯೇ, ತನಿಖಾ ಕಾರ್ಯ ಕೈಗೊಳ್ಳುವುದಾಗಿಯೂ ಭರವಸೆ ನೀಡಿದೆ. ಇಷ್ಟೇ ಅಲ್ಲದೆಯೇ ಪ್ರಯಾಣಿಕರಿಗೆ ಆದ ಅನಾನುಕೂಲತೆಗೆ ಕಂಪನಿಯು ವಿಷಾದ ವ್ಯಕ್ತಪಡಿಸಿದೆ.