ಸುದ್ಧಿಕನ್ನಡ ವಾರ್ತೆ
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗು ಸೆರೆವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್ ರಾಜೀನಾಮೆಗೆ ಸಮಯ ನಿಗದಿಯಾಗಿದೆ. ಹಾಗಿದ್ದರೆ ದೆಹಲಿಯ ನೂತನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಜಾಮೀನಿನ ಮೇಲೆ ಹೊರ ಬಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್ ಸೆಪ್ಟೆಂಬರ್ 17 ರಂದು ಮಂಗಳವಾರ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅರವಿಂದ ಕೇಜರಿವಾಲ್ ರವರು ದೆಹಲಿಯ ಲೆಪ್ಟನೆಂಟ್ ಗವರ್ನರ್ ರವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜೈಲಿನಿಂದ ಹೊರಬರುತ್ತಿದ್ದಂತೆಯೇ ಕೇಜರಿವಾಲ್ ಅಚ್ಚರಿಯ ನಿರ್ಧಾರ ಘೋಷಿಸಿದ್ದಾರೆ. ಹಾಗಾದರೆ ಮುಂದಿನ ಮುಖ್ಯಮಂತ್ರಿಯಾರು ..? ಎಂಬ ಬಗ್ಗೆ ಕೂಡ ಕುತೂಹಲ ಹೆಚ್ಚಾಗಿದೆ.

ಹಾಗಿದ್ದರೆ ಮುಂದಿನ ಮುಖ್ಯಮಂತ್ರಿ ರೇಸ್‍ನಲ್ಲಿ ಯಾರಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ…
ಸಚಿವೆ ಅತಿಶಿ, ಸೌರಭ್ ಭಾರಧ್ವಾಜ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಈ ಪ್ರಮುಖರು ಮುಖ್ಯಮಂತ್ರಿ ರೇಸ್‍ನಲ್ಲಿದ್ದಾರೆ ಎನ್ನಲಾಗಿದೆ. ಮುಂದಿನ ಐದಾರು ತಿಂಗಳಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೂರದೃಷ್ಠಿಯನ್ನಿಟ್ಟುಕೊಂಡು ಕೇಜರಿವಾಲ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ದೆಹಲಿ ರಾಜಕಾರಣ ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದೆ.