ಸುದ್ಧಿಕನ್ನಡ ವಾರ್ತೆ
ಗೋವಾ ರಾಜ್ಯದ ಮೀನುಗಾರರು ಬಾಣಾವಲಿ ಕಡಲತೀರದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಸಕ್ತ ಮೀನುಗಾರಿಕೆ (Fishing) ಋತುವನ್ನು ಪ್ರಾರಂಭಿಸಿದರು.

ಸಾಂಪ್ರದಾಯಿಕ ಮೀನುಗಾರರು ತಮ್ಮ ಬೋಟ್ ಗಳನ್ನು ಸಮುದ್ರಕ್ಕೆ ಇಳಿಸಿ ಮೀನುಗಳಿಗಾಗಿ ಬಲೆ ಹಾಕಿದರು. ಆಗಸ್ಟ್ 1 ರಂದು ಮೀನುಗಾರಿಕೆ ನಿಷೇಧವನ್ನು ತೆಗೆದುಹಾಕಿದ ನಂತರ, ಹವಾಮಾನ ಮುನ್ಸೂಚನೆಯನ್ನು ಗಣನೆಗೆ ತೆಗೆದುಕೊಂಡು ತಮ್ಮ ಬೋಟ್ ಗಳನ್ನು ಆಳ ಸಮುದ್ರಕ್ಕೆ ಇಳಿಸುವುದಾಗಿ ಸಾಂಪ್ರದಾಯಿಕ ಮೀನುಗಾರರು ಮಾಹಿತಿ ( traditional fishermen) ನೀಡಿದರು. ಈ ಸಂದರ್ಭದಲ್ಲಿ ಪುರೋಹಿತರು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು ಮತ್ತು ಈ ಋತುವಿನಲ್ಲಿ ಹೇರಳವಾಗಿ ಮೀನು ಹಿಡಿಯುವಂತೆ ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸಬಾರದು ಎಂದು ಪ್ರಾರ್ಥಿಸಿದರು.

 

ಜೂನ್‍ನಿಂದ ಜಾರಿಯಲ್ಲಿರುವ ಗೋವಾದಲ್ಲಿ ಮೀನುಗಾರಿಕೆ ನಿಷೇಧವು ಆಗಸ್ಟ್ 1 ರಂದು ತೆರವುಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ ಮತ್ತು ರಾಜ್ಯದಲ್ಲಿನ ಹವಾಮಾನ ಮುನ್ಸೂಚನೆಯನ್ನು ಗಣನೆಗೆ ತೆಗೆದುಕೊಂಡು ತಮ್ಮ ಬೋಟ್ ಗಳನ್ನು ಆಳ ಸಮುದ್ರಕ್ಕೆ ಇಳಿಸಲಿದ್ದಾರೆ. ಪ್ರಸ್ತುತ, ಕುಟ್ಬನ್ ಮತ್ತು ಬಾಣಾವಲಿ ಸೇರಿದಂತೆ ದಕ್ಷಿಣ ಗೋವಾದ ವಿವಿಧ ಜೆಟ್ಟಿಗಳಲ್ಲಿ ಬೋಟ್ ಗಳನ್ನು ದುರಸ್ತಿ ಮಾಡಲು, ಬಲೆಗಳನ್ನು ನಿರ್ವಹಿಸಲು, ಕಾರ್ಮಿಕರಿಗೆ ಸಾಮಗ್ರಿಗಳನ್ನು ಪೂರೈಸಲು ಸಿದ್ಧಥಾ ಕಾರ್ಯ ನಡೆಯುತ್ತಿದೆ.

 

ನಿಷೇಧದ ಸಮಯದಲ್ಲಿ, ಜಾಖರ್ಂಡ್, ಕರ್ನಾಟಕ, ಬಿಹಾರ, ಉತ್ತರ ಪ್ರದೇಶ ಮತ್ತು ಒಡಿಶಾದ ಕಾರ್ಮಿಕರು ತಮ್ಮ ಊರಿಗೆ ಮರಳಿದ್ದರು. ಸದ್ಯ ಕೆಲವು ಕಾರ್ಮಿಕರು ಜೆಟ್ಟಿಗಳಿಗೆ ಹಿಂತಿರುಗುತ್ತಿದ್ದಾರೆ. ಇದರಿಂದಾಗಿ, ಜೆಟ್ಟಿಗಳಲ್ಲಿ ಮೀನುಗಾರಿಕೆಗೆ ಸಿದ್ಧತೆ ನಡೆಯುತ್ತಿದೆ. ಮೀನುಗಾರಿಕೆ ನಿಷೇಧದಿಂದಾಗಿ, ಸ್ಥಳೀಯ ಮಾರುಕಟ್ಟೆಯಲ್ಲಿ ಎರಡು ತಿಂಗಳ ಕಾಲ ತಾಜಾ ಮೀನಿನ ಕೊರತೆ ಇತ್ತು. ಪರಿಣಾಮವಾಗಿ, ಗ್ರಾಹಕರು ಐಸ್ ನಲ್ಲಿ ಸಂಗ್ರಹಿಸಿದ ಮೀನುಗಳನ್ನು ಖರೀದಿಸಬೇಕಾಯಿತು. ಇದೀಗ ಸೀಸನ್ ಪ್ರಾರಂಭವಾಗುತ್ತಿರುವುದರಿಂದ, ತಾಜಾ ಮೀನುಗಳು ಸಮಂಜಸ ಬೆಲೆಯಲ್ಲಿ ಲಭ್ಯವಾಗುತ್ತವೆ ಎಂಬ ಭರವಸೆಯನ್ನು ಮೀನು ಆಹಾರಪ್ರಿಯರು ವ್ಯಕ್ತಪಡಿಸುತ್ತಿದ್ದಾರೆ.