ಸುದ್ಧಿಕನ್ನಡ ವಾರ್ತೆ
ಮುಂಬೈನಲ್ಲಿ (Mumbai) ವೈದ್ಯಕೀಯ ಚಿಕಿತ್ಸೆಗಾಗಿ ಗೋವಾದಿಂದ ಹೋಗುವ ಗೋವಾ ನಿವಾಸಿಗಳಿಗೆ ಒಂದು ಸಂತಸದ ಸುದ್ದಿ. ಈಗ ಗೋವಾ ರಾಜ್ಯ ಸರ್ಕಾರವು ಗೋವನ್ನರಿಗೆ ಚಿಕಿತ್ಸೆಯ ಅವಧಿಯಲ್ಲಿ ಮುಂಬೈನ ಗೋವಾ ಭವನದಲ್ಲಿ (Goa Bhavan) ತಂಗಲು ಶೇಕಡಾ 50 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.
ಮುಂಬೈನ ಜುಹು ಪ್ರದೇಶದಲ್ಲಿರುವ ಗೋವಾ ಭವನದ ನವೀಕರಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಆಗಸ್ಟ್ 10 ರಿಂದ ಸಾರ್ವಜನಿಕರಿಗೆ ಇದನ್ನು ತೆರೆಯಲಾಗುವುದು. ಸಾಮಾನ್ಯ ಆಡಳಿತ ಇಲಾಖೆ ಇದಕ್ಕಾಗಿ ದರಗಳನ್ನು ನಿಗದಿಪಡಿಸಿದೆ ಮತ್ತು ಮುಂಬೈನಲ್ಲಿ ಗೋವಾದಿಂದ ವೈದ್ಯಕೀಯ ಚಿಕಿತ್ಸೆಗಾಗಿ (For medical treatment) ಹೋಗುವ ಗೋವಾ ನಿವಾಸಿಗಳಿಗೆ ವಿಶೇಷ ರಿಯಾಯಿತಿಗಳನ್ನು (Special discount)ನೀಡಲಾಗುವುದು.
ಮುಂಬೈನಲ್ಲಿ ಚಿಕಿತ್ಸೆಗಾಗಿ ಗೋವಾ ಭವನದಲ್ಲಿ ಉಳಿಯಲು ಬಯಸುವ ಗೋವಾ ನಿವಾಸಿಗಳು ಸಂಬಂಧಪಟ್ಟ ಆಸ್ಪತ್ರೆಯಿಂದ ವೈದ್ಯಕೀಯ ಪ್ರಮಾಣಪತ್ರ (Medical certificate) ಮತ್ತು ಅವರ ಸ್ವಂತ ಮತದಾರರ ಗುರುತಿನ ಚೀಟಿಯನ್ನು ಸಲ್ಲಿಸಬೇಕು. ಈ ದಾಖಲೆಗಳನ್ನು ಸಲ್ಲಿಸಿದ ನಂತರ, ಅವರಿಗೆ ಶೇಕಡಾ 50 ರಷ್ಟು ರಿಯಾಯಿತಿ ಅನ್ವಯವಾಗಲಿದೆ. ಒಂದು ದಿನದ ಕೊಠಡಿ ದರ 1000 ರೂ.. ರಿಯಾಯಿತಿಯ ನಂತರ, ಚಿಕಿತ್ಸೆಗಾಗಿ ಬರುವ ಗೋವಾ ನಿವಾಸಿಗಳಿಗೆ 500 ರೂ. ದರದಲ್ಲಿ ಲಭ್ಯವಿರುತ್ತದೆ.
ಸಾಮಾನ್ಯ ನಾಗರಿಕರು, ಸರ್ಕಾರಿ ಅಧಿಕಾರಿಗಳು, ಸಂಸದರು ಅಥವಾ ಶಾಸಕರಿಗೆ ದರ ಒಂದೇ ಆಗಿರುತ್ತದೆ. ವಸತಿ ನಿಲಯದ ದರವನ್ನು ಪ್ರತಿ ವ್ಯಕ್ತಿಗೆ 400 ರೂ. ಎಂದು ನಿಗದಿಪಡಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ವಿಶೇಷ ದರ ಅನ್ವಯವಾಗುತ್ತದೆ, ಒಂದು ಕೋಣೆಗೆ ದಿನಕ್ಕೆ ರೂ. 600 ಮತ್ತು ವಸತಿ ನಿಲಯಕ್ಕೆ ರೂ. 400.
ಶೈಕ್ಷಣಿಕ ಪ್ರವಾಸಗಳಿಗೆ ಬರುವ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯಗಳು ಮಾತ್ರ ಲಭ್ಯವಿದೆ. ಹೆಚ್ಚುವರಿ ಬೆಡ್‍ಶೀಟ್ ಮತ್ತು ಹಾಸಿಗೆಗೆ ರೂ. 300 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಎಲ್ಲಾ ಕೊಠಡಿಗಳು ಹವಾನಿಯಂತ್ರಿತ ಆಗಿದೆ.
ಕ್ಯಾನ್ಸರ್ ರೋಗಿಗಳಿಗೆ ದೊಡ್ಡ ಪರಿಹಾರ
ಗೋವಾದ ಅನೇಕ ನಾಗರಿಕರು ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಮುಂಬೈಗೆ ಹೋಗುತ್ತಾರೆ. ಅವರು ಕಿಮೊಥೆರಪಿಗಾಗಿ ಹಲವಾರು ವಾರಗಳ ಕಾಲ ಮುಂಬೈನಲ್ಲಿ ಇರಬೇಕಾಗುತ್ತದೆ. ಚಿಕಿತ್ಸೆಯ ವೆಚ್ಚ ಕೈಗೆಟುಕುವದಾದರೂ, ಮುಂಬಯಿಯಲ್ಲಿಬಾಡಿಗೆ ರೂಂ ವೆಚ್ಚವು ದೊಡ್ಡ ಅಡಚಣೆಯಾಗಿದೆ. ಈ ಸಂದರ್ಭದಲ್ಲಿ, ಈ ಶೇಕಡಾ 50 ರಷ್ಟು ರಿಯಾಯಿತಿ ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ದೊಡ್ಡ ಪರಿಹಾರವಾಗಲಿದೆ.