ಸುದ್ಧಿಕನ್ನಡ ವಾರ್ತೆ
ನೈತಿಕತೆಯ ಗಡಿ ದಾಟಿ ಆಚೆಗೆ ಹೋಗುತ್ತಿರುವ ಯುವಕ-ಯುವತಿಯರನ್ನು ಸರಿಯಾದ ಮಾರ್ಗದರ್ಶನದ ಮೂಲಕ ಸರಿದಾರಿಗೆ ತರಬೇಕಿದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಚಾತುರ್ಮಾಸ್ಯ ವೃತಸಂಕ್ಲಪದ ನಿಮಿತ್ತ ಸುಧನ್ವಾ ಸಭಾಭವನದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಶ್ರೀ ಆನಂದ ಬೋಧೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.

ಇತ್ತೀಚೆಗೆ ಯುವ ಸಮುದಾಯ ಭೋಗದಿಂದ ಓದುವ ಆಸಕ್ತಿ ಕಳೆದುಕೊಂಡು ಕುಟುಂಬದ ಆಚೆ ಹೋಗುತ್ತಾರೆ. ಉದ್ವೇಗದಿಂದ ಮಾನಸಿಕ, ದೈಹಿಕವಾಗಿ ಪರಿಣಾಮ ಬೀರುತ್ತದೆ. ಇವರಿಗೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆಯಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಧರ್ಮಪೀಠಗಳ ಕರ್ತವ್ಯವಾಗಿದೆ. ಹೊರಿಯರ ಹಿಡಿತ ಕಟ್ಟುಪಾಡುಗಳು, ಸಂಸ್ಕಾರ ನೀಡುವುದರಿಂದ ಯುವಕರನ್ನು ಸರಿದಾರಿಗೆ ತರಬಹುದು ಎಂದು ಶ್ರೀಗಳು ನುಡಿದರು.

ಧಾರ್ಮಿಕ ವೃತಾಚರಣೆಗಳನ್ನು ಮಾಡುವುದರಿಂದ ಮನಸ್ಸು ಶರೀರವನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು. ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳವಾಗುತ್ತಿದೆ. ಜೀವನಶೈಲಿ ಬದಲಾಗಿರುವುದು ಹೃದಯಾಘಾತಕ್ಕೆ ಪ್ರಮುಖ ಕಾರಣ ಎಂದು ಹೇಳುತ್ತಾರೆ. ವ್ಯಾಯಾಮದ ಕೊರತೆ, ಆಹಾರ ಪದ್ಧತಿ, ಹೆಚ್ಚಾಗಿ ಮೊಬೈಲ್ ಬಳಕೆ ಕಾರಣವಾಗಿದೆ ಎಂದು ಶ್ರೀಗಳು ನುಡಿದರು.

ಅಖಿಲ ಭಾರತ ಹವ್ಯಕ ಮಹಾಸಭಾ ಅಧ್ಯಕ್ಷ ರಘುನಾಥ ಎಸ್ ಮಾತನಾಡಿದರು.