ಸುದ್ಧಿಕನ್ನಡ ವಾರ್ತೆ
ಇಂದು ಮಾತೃಭಾಷೆ ಮಾತನಾಡುವವರ ಸಂಖ್ಯೆ ಎಲ್ಲ ಜಾತಿಗಳಲ್ಲಿಯೂ ಕಡಿಮೆಯಾಗುತ್ತಿದೆ. ಮಾತೃಭಾಷೆ ಮಾತನಾಡುವ ಜಾಗದಲ್ಲಿ ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಇಂದಿನ ಮಕ್ಕಳಿಗೆ ಮಾತೃ ಭಾಷೆ ಮರೆತುಹೋಗಿದೆ ಎಂದು ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗಧ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳು ನುಡಿದರು.ಬೆಂಗಳೂರಿನಲ್ಲಿ ಆಯೋಜಿಸಿದ್ದ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಶ್ರೀಗಳ 32 ನೇಯ ಚಾತುರ್ಮಾಸ್ಯ ಜುಲೈ 10 ರಿಂದ ಆಷಾಢ ಶುದ್ಧ ಪೌರ್ಣಿಮೆಯಿಂದ ಸಪ್ಟೆಂಬರ್ 7 ಭಾದ್ರಪದ ಶುದ್ಧ ಪೌರ್ಣಿಮೆ ವರೆಗೆ ಗೋಕರ್ಣದ ಅಶೋಕೆಯಲ್ಲಿ ನೆರವೇರಲಿದೆ.

ನಮ್ಮ ಮಕ್ಕಳಲ್ಲಿ ನಮ್ಮ ಮಾತೃಭಾಷೆ ಮಾತನಾಡದೆಯೇ ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಮಾತನಾಡುವುದು ಘೋರ ತಪ್ಪು. ಮಾತೃ ಭಾಷೆಯಲ್ಲಿ ನಮ್ಮ ಹಿರಿಯರು ಬಳಸುತ್ತಿದ್ದ ಹಲವು ಶಬ್ದಗಳು ಇಂದು ಮರೆತು ಹೋಗಿದೆ. ಮನೆಯ ಮಾತು ಮರೆತುಹೋಗಿದೆ. ನಮ್ಮ ಭಾಷೆಯ ಸ್ಥಳದಲ್ಲಿ ಬೇರೆ ಭಾಷೆ ತೂರಿಕೊಂಡಿದೆ. ಕನ್ನಡ ಮಾತನಾಡುವ ಸಂದರ್ಭದಲ್ಲಿಯೂ ನಾನು ಕನ್ನಡವನ್ನು ಕಡೆಗಳಿಸುತ್ತೇವೆ. ಪ್ರಸಕ್ತ ಬಾರಿಯ ಚಾತುರ್ಮಾಸ್ಯ ಭಾಷೆ ಶುದ್ಧಗೊಳಿಸುವ ಪ್ರಯತ್ನಕ್ಕೆ ಶ್ರೀಕಾರ ಹಾಕಲಿದೆ. ಚಾತುರ್ಮಾಸ್ಯ ಶುಭಾರಂಭವಾಗಿದ್ದು ಈ ಭಾಷಾ ಅಭಿಯಾನ ನಿರಂತರ ಸಾಗಲಿದೆ ಎಂದು ಶ್ರೀಗಳು ನುಡಿದರು.

ಇದೇ ಮೊದಲ ಬಾರಿಗೆ ಈರೀತಿಯ ಸೂತ್ರ ಇಟ್ಟುಕೊಂಡು ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಭಾಷೆ ಉಳಿಸುವುದು ಕೂಡಾ ಧರ್ಮದ ಒಂದು ಅಂಗವೇ ಆಗಿದೆ. ಹರಿಯುವುದು ನೀರಿನ ಧರ್ಮ, ಉರಿಯುವುದು ಬೆಂಕಿಇಯ ಧರ್ಮ, ನಮ್ಮ ಭಾಷೆ ಮಾತನಾಡುವುದು ನಮ್ಮ ಧರ್ಮ ಎಂದು ಶ್ರೀಗಳು ನುಡಿದರು.
ನಮ್ಮ ದೇಶದಲ್ಲಿ ಆಯಾ ರಾಜ್ಯದ ಜನರು ಅಲ್ಲಿನ ಸ್ಥಳೀಯ ಭಾಷೆ ಮಾತನಾಡುತ್ತಾರೆ. ಯಾವ ಭಾಷೆ ಮೇಲೂ ಕೀಳೂ ಅಲ್ಲ. ಒಂದು ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಿದ್ದು ಮೇಲು ಕೀಳು ಎಂಬ ಭಾವನೆಯ ಚರ್ಚೆಯ ಅಗತ್ಯವಿಲ್ಲ ಎಂದು ಶ್ರೀಗಳು ನುಡಿದರು.