ಸುದ್ಧಿಕನ್ನಡ ವಾರ್ತೆ
ನಿಸರ್ಗರಮ್ಯ ಮಹಾರಾಷ್ಟ್ರದ ಅಂಬೋಲಿಯಲ್ಲಿ (Amboli) ಮಳೆಗಾಲದ ಜಲಪಾತದ ಆನಂದ ಸವಿಯಲು ಬಂದಿದ್ದ ಕೊಲ್ಲಾಪುರದ ಜಿಲ್ಲಾ ಪರಿಷತ್ ಕರ್ಮಚಾರಿ 400 ಅಡಿ ಆಳದ ಜಲಪಾತದಲ್ಲಿ (400 feet deep waterfall) ಬಿದ್ದ ಆಘಾತಕಾರಿ ಘಟನೆ ನಡೆದಿದೆ. ಈ ದುರ್ಘಟನೆಗೊಳಗಾದ ವ್ಯಕ್ತಿಯ ಹೆಸರು ರಾಜೇಂದ್ರ ಬಾಳಾಸೊ ಸನಗರ್ (45ವ,ಚಿಲೆ ಕಾಲೋನಿ ಕೊಲ್ಲಾಪುರ) ಎಂದು ಗುರುತಿಸಲಾಗಿದೆ.
ರಾಜೇಂದ್ರ ಇವರು ತನ್ನ 14 ಜನ ಸಹೋದ್ಯೋಗಿಗಳ ಟೀಂ ನೊಂದಿಗೆ ಅಂಬೋಲಿಯ ಪ್ರಸಿದ್ಧ ಕಾವಳೆಸಾದ ಪರಿಸರದಲ್ಲಿರುವ ಜಲಪಾತ ವೀಕ್ಷಣೆಗೆ ಬಂದಿದ್ದರು. ಎಲ್ಲ ಸಹೋದ್ಯೋಗಿಗಳು ಗಾಳಿ ಬೀಸುವ ವಿರುದ್ಧ ದಿಕ್ಕಿನಲ್ಲಿ ರುಮಾಲ್ ಹಿಡಿದು ಆನಂದಿಸುತ್ತಿದ್ದರು. ಆಗ ರಾಜೇಂದ್ರ ರವರ ರುಮಾಲ್ ಜಲಪಾತದ ನೀರಲ್ಲಿ ಕೈತಪ್ಪಿ ಬಿತ್ತು. ರುಮಾಲ್ ತೆಗೆದುಕೊಳ್ಳಲು ರಾಜೇಂದ್ರ ರವರು ನೀರಿಗೆ ಇಳಿದಾಗ ಕಾಲು ಜಾರಿ ಜಲಪಾತದ ಮೇಲಿಂದ 400 ಅಡಿ ಆಳಕ್ಕೆ ಬಿದ್ದ ಭೀಕರ ಘಟನೆ ನಡೆದಿದೆ.
ಈ ರ್ದುರ್ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಂಬೋಲಿ ಪೋಲಿಸರು ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದರು. ಆದರೆ ಈ ಭಾಗದಲ್ಲಿ ಭಾರಿ ಪ್ರಮಾಣದ ಮಂಜು ಮುಸುಕಿದ್ದರಿಂದ ಜಲಪಾತದ ಕೆಳಗೆ ಯಾವುದೇ ದೃಶ್ಯ ಗೋಚರಿಸುತ್ತಿರಲಿಲ್ಲ. ಇದರಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಶನಿವಾರ ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸಲಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಮೈದುಂಬಿಕೊಳ್ಳುವ ಅಂಬೋಲಿ ಘಾಟ್ ನಲ್ಲಿರುವ (Amboli Ghat) ಜಲಪಾತಗಳ ವೀಕ್ಷಣೆಗೆ ವಿವಿಧ ರಾಜ್ಯಗಳಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತರೆ. ಆದರೆ ಶುಕ್ರವಾರ ಅಂಬೋಲಿಯ ಜಲಪಾತದಲ್ಲಿ ನಡೆದಿರುವ ದುರ್ಘಟನೆಯು ಎಲ್ಲರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಅಂಬೋಲಿಯಲ್ಲಿ ನಡೆದಿರುವ ಈ ಭೀಕರ ಅಪಘಾತವು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.