ಸುದ್ಧಿಕನ್ನಡ ವಾರ್ತೆ
ಇತ್ತೀಚೆಗೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ AIR INDIA ವಿಮಾನ ದುರಂತ ಜನತೆಯ ಮನಸ್ಸಿಂದ ಮಾಸಿಲ್ಲ, ಇದರಿಂದಾಗಿ ವಿಮಾನಕ್ಕೆ ಸಂಬಂಧಿಸಿದ ಒಂದು ಸಣ್ಣ ಘಟನೆ ನಡೆದರೂ ಎಲ್ಲರೂ ಬೆಚ್ಚಿ ಬೀಳುವಂತಾಗುತ್ತಿದೆ. ಶುಕ್ರವಾರ ದೆಹಲಿಯಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ (AIR INDIA) ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣವನ್ನು ರದ್ದುಗೊಳಿಸಿದ ಘಟನೆ ನಡೆದಿದೆ.
ಜೂನ್ 12 ರಂದು ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತು ಲಂಡನ್‍ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಎಐ-171 ಅಹಮದಾಬಾದ್‍ನಲ್ಲಿ ಪತನಗೊಂಡಿತ್ತು.
‘ಜೂನ್ 20 ರಂದು ಪುಣೆಯಿಂದ ದೆಹಲಿಗೆ ಹಾರಲು ನಿಗದಿಯಾಗಿದ್ದ ಎಐ2470 ವಿಮಾನವು (AIR INDIA) ಪಕ್ಷಿ ಡಿಕ್ಕಿ ಹೊಡೆದ ಕಾರಣ ರದ್ದುಗೊಂಡಿದೆ. ವಿಮಾನವು ಪುಣೆಯಲ್ಲಿ ಸುರಕ್ಷಿತವಾಗಿ ಇಳಿದ ನಂತರ ಎಂಜಿನಿಯರಿಂಗ್ ತಂಡವು ವ್ಯಾಪಕ ತಪಾಸಣೆ ನಡೆಸುತ್ತಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರಿಗೆ ವಸತಿ ಸೌಕರ್ಯ ಒದಗಿಸುವುದು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ’ ಎಂದು ಏರ್ ಇಂಡಿಯಾ ಮಾಧ್ಯಮಕ್ಕೆ ಮಾಹಿತಿ ನೀಡಿದೆ.
ಟಿಕೆಟ್ ರದ್ದತಿ ಅಥವಾ ಕಾಂಪ್ಲಿಮೆಂಟರಿ ರೀಶೆಡ್ಯೂಲಿಂಗ್ ಮೇಲಿನ ರೀಫಂಡ್ ಆಯ್ಕೆಯನ್ನು ಸಹ ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಪ್ರಯಾಣಿಕರನ್ನು ದೆಹಲಿಗೆ ಕರೆದೊಯ್ಯಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.