ಸುದ್ದಿಕನ್ನಡ ವಾರ್ತೆ
Goa/Belagavi: ಮಳೆಗಾಲ ಬಂತೆಂದರೆ ಪ್ರಕೃತಿಯು ಹಚ್ಚ ಹಸಿರಾಗಿ ಕಂಗೊಳಿಸುತ್ತದೆ. ಈ ಹಚ್ಚ ಹಸಿರಿನ ನಡುವ ಮಳೆಗಾಲದಲ್ಲಿ ಹತ್ತಾರು ಜಲಪಾತಗಳೂ ಹುಟ್ಟಿಕೊಳ್ಳುತ್ತವೆ. ಈ ಹಸಿರಿನ ನಡುವೆ ಜಲಪಾತ ವೀಕ್ಷಣೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಂತಹ ಒಂದು ಸುಂದರ ಪ್ರವಾಸ ಕೈಗೊಳ್ಳಬೇಕೆಂದಿದ್ದರೆ ಕರ್ನಾಟಕಕ್ಕೆ ಹೊಂದಿಕೊಂಡಿರುವ ಚೋರ್ಲಾ ಘಾಟ್ ಗೆ ಮಳೆಗಾಲದ ಸಂದರ್ಭದಲ್ಲಿ ಒಮ್ಮೆ ಭೇಟಿಕೊಡಿ. ಮಳೆಗಾಲದ ಸಂದರ್ಭದಲ್ಲಿ ಚೋರ್ಲಾ ಘಾಟ್ ಪ್ರವಾಸಿಗರ ಸ್ವರ್ಗದಂತೆ ಕಂಡುಬರುವುದಂತೂ ನಿಜ.

ಕರ್ನಾಟಕದ ಬೆಳಗಾವಿ ಭಾಗದಿಂದ ಅತಿ ಅತ್ತಿರದ ಸುಂದರ ತಾಣ ಚೋರ್ಲಾ ಘಾಟ್. ಮಳೆಗಾಲದ ಸಂದರ್ಭದಲ್ಲಿ ಚೋರ್ಲಾ ಘಾಟ್ ನಲ್ಲಿ ಹತ್ತಾರು ಜಲಪಾತಗಳು ಮೈತಳೆದುಕೊಳ್ಳುತ್ತವೆ. ಇಷ್ಟೇ ಅಲ್ಲದೆಯೇ ಈ ಎತ್ತರದ ಗುಡ್ಡ ಪ್ರದೇಶದಿಂದ ಹಚ್ಚ ಹಸುರಿನ ಪ್ರದೇಶ ಭಾರಿ ಮಂಜಿನಿಂದ ಕೂಡಿರುವುದರಿಂದ ಪ್ರವಾಸಿಗರ ಸ್ವರ್ಗದಂತೆ ಭಾಸವಾಗುವುದಂತೂ ನಿಜ.

ಮಳೆಗಾಲದ ಸಂದರ್ಭದಲ್ಲಿ ಚೋರ್ಲಾ ಘಾಟ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಚೋರ್ಲಾ ಘಾಟ್ ನಲ್ಲಿ 15 ಕ್ಕೂ ಹೆಚ್ಚು ಜಲಪತಗಳನ್ನು ಕಾಣಬಹುದಾಗಿದೆ. ಭಾನುವಾರ ಮತ್ತು ರಜಾ ದಿನಗಳಲ್ಲಿ ಇಲ್ಲಿ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ದುಪ್ಪಟ್ಟಾಗಿರುತ್ತದೆ.

ಎಚ್ಚರವಿರಲಿ…
ಚೋರ್ಲಾ ಘಾಟ್ ನಲ್ಲಿ ಜಲಪಾತ ವೀಕ್ಷಣೆಗೆ ಆಗಮಿಸುವವರು ತಮ್ಮ ತಮ್ಮ ಸುರಕ್ಷತೆಗೆ ಎಚ್ಚರದಿಂದ ತೆರಳುವುದು ಒಳಿತು. ಇವು ಸಣ್ಣ ಜಲಪಾತದಂತೆ ಕಂಡರೂ ಕೂಡ ಕಲ್ಲು ಬಂಡೆಗಳಿಂದ ಕೂಡಿರುವುದರಿಂದ ಜಲಪಾತಕ್ಕಿಳಿದು ಮೋಜುಮಸ್ತಿ ಮಾಡಿದರೆ ಅಪಾಯ ತಂದೊಡ್ಡಬರುದು.