ಸುದ್ದಿ ಕನ್ನಡ ವಾರ್ತೆ
ರಬಕವಿ-ಬನಹಟ್ಟಿ : ಕಡಿಮೆ ಜಾಗ, ಕಡಿಮೆ ಅವಧಿ, ಉತ್ತಮವಾದ ಬೆಳೆ ಎಲ್ಲವನ್ನೂ ಏಕ ಕಾಲಕ್ಕೆ ಸಾಧಿಸುವುದು ಅಪರೂಪ. ಆದರೆ ಇಂದಿನ ಆಧುನಿಕ ಸಂಶೋಧನೆ ಹಾಗೂ ಪ್ರಯೋಗಗಳಿಂದ ಯಾವ ಪ್ರದೇಶದಲ್ಲಾದರೂ ಉತ್ತಮವಾದ ಬೆಳೆ ಬೆಳೆದು ಉತ್ತಮ ಇಳುವರಿ ಪಡೆದು, ಮಾರುಕಟ್ಟೆಯ ಸದುಪಯೋಗದೊಂದಿಗೆ ಉತ್ತಮ ಲಾಭಗಳಿಸಹುದು ಎನ್ನುವುದನ್ನು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ರೈತರಾದ ದೇವರಾಜ ರಾಠಿ ದುರ್ಗಾದೇವಿ ರಸ್ತೆಯ ಹತ್ತಿರವಿರುವ ಅರ್ದ ಎಕರೆ ಜಮೀನಿನಲ್ಲಿ ವೈe್ಞÁನಿಕವಾಗಿ ಉತ್ತಮವಾಗಿ ವಿಳ್ಯೆದೆಲೆಯನ್ನು ಬೆಳೆದು ಸಾಧಿಸಿ ತೋರಿಸಿದ್ದಾರೆ.

ಕೃಷಿಯನ್ನೇ ಜೀವವಾಗಿರಿಸಿಕೊಂಡು ಇವರು ಕೃಷಿಯಲ್ಲಿ ಸದಾ ಹೊಸತನವನ್ನು ತಂದು ವಿಶೇಷ ಸಾಧನೆ ಮಾಡಬೇಕೆಂಬ ಹಂಬಲದ ವ್ಯಕ್ತಿಗಳಾಗಿದ್ದು, ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು. ಕಳೆದ ಹಲವಾರು ವರ್ಷಗಳಿಂದ ಒಂದಿಲ್ಲ ಒಂದು ಪ್ರಯೋಗಗಳನ್ನು ಮಾಡುತ್ತಾ ಯಶಸ್ವಿಯಾಗುತ್ತಾ ಮುನ್ನಡೆದಿದ್ದಾರೆ.
ಗುಲಾಬಿ, ಪಪ್ಪಾಯಿ, ಗ್ಯಾಲನ ತಳಿಯ ಬದನೆ, ಸೇವಂತಿಗೆ, ಚೆಂಡೂ ಹೂ, ಬಾಳೆ, ಕ್ಯಾಪ್ಸಿಕಾಮ್ ಸೇರಿದಂತೆ ಅನೇಕ ವಿಧಗಳ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗುವುದರ ಜೊತೆಗೆ ತಮ್ಮ ಮಾರ್ಗದರ್ಶನದಲ್ಲಿ ಬೇರೆ ರೈತರನ್ನು ಬೆಳೆಸುತ್ತಾ ಮುನ್ನಡೆದಿದ್ದಾರೆ.

ಅರ್ದ ಎಕರೆ ವಿಳ್ಯೆದೆಲೆಯನ್ನು ಕಳೆದ ವರ್ಷ ಜೂನದಲ್ಲಿ ನಾಟಿ ಮಾಡಿದ್ದು, ಈಗ ಅದು ಫಲ ನೀಡುತ್ತಿದೆ. ಇದಕ್ಕೆ ಹೆಚ್ಚು ಸಾವಯವ ಗೊಬ್ಬರವನ್ನು ಬಳಸಿದ್ದು, ತಿಪ್ಪೆಗೊಬ್ಬರ, ಕುರಿ ಹಿಕ್ಕಿ, ಜೀವಾಮೃತ ನೀಡಿದ್ದೇವೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಬಳ್ಳಿ ಕೆಳಗೆ ಬೀಳದಂತೆ ಕಟ್ಟುತ್ತಿರಬೇಕು. ಸ್ವಚ್ಛತೆಯನ್ನು ಹೆಚ್ಚಾಗಿ ಕಾಪಾಡಬೇಕು.
ಬಳ್ಳಿಗೆ ಆಸರೆಯಾಗಿ ನುಗ್ಗೆ ಮತ್ತು ಚೊಗಚೆಯ ಗಿಡಗಳನ್ನು ಬೆಳೆಸಿದ್ದು, ನುಗೆಯಿಂದಲೂ ಆದಾಯ ಬರುವುದರ ಜೊತೆಗೆ ಜಾನುವಾರುಗಳಿಗೆ ಮೇವು ಕೂಡಾ ಆಗುತ್ತದೆ.
ಪ್ರತಿ ಇಪ್ಪತೈದ ರಿಂದ ಮೂವತ್ತು ದಿನಗಳಿಗೆ ಒಮ್ಮೆ ವಿಳ್ಯೆದೆಲೆ ಕಟಾವಿಗೆ ಬರುತ್ತದೆ. ಒಂದು ಬಾರಿ ಕಟಾವು ಮಾಡಿದರೆ ಒಂದು ಎಕರೆಗೆ ೩೫ ರಿಂದ ೪೦ ಡಾಗ ಗಳಷ್ಟು ಎಲೆಗಳು ಬರುತ್ತವೆ. ಒಂದು ಡಾಗನಲ್ಲಿ ೧೨೦೦೦ ಎಲೆಗೆಳು ಬರುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ವಿಳ್ಯೆದೆಲೆಗೆ ಉತ್ತಮ ಬೆಲೆ ಇದ್ದು, ಒಂದು ಡಾಗ ಎಲೆಗೆ ರೂ. ೩೫೦೦ ರಿಂದ ರೂ ೪೦೦೦ ಬೆಲೆ ಇದ್ದು ಸಾಕಷ್ಟು ಲಾಭ ನೀಡುತ್ತಿದೆ. ಸದ್ಯ ಅರ್ಧ ಎಕರೆಯಲ್ಲಿ ತಿಂಗಳಿಗೆ ೩೫ ರಿಂದ ೪೦ ಡಾಗ ಎಲೆ ಬರುತ್ತಿದೆ. ಒಟ್ಟು ವರ್ಷದಲ್ಲಿ ಎಂಟು ತಿಂಗಳುಗಳ ಕಾಲ ಬೆಳೆ ಬರುತ್ತದೆ. ೮ ತಿಂಗಳ ನಂತರ ಸ್ವಲ್ಪ ಕಡಿಮೆ ಇಳುವರಿ ಬರುತ್ತದೆ ಎನ್ನುತ್ತಾರೆ ರೈತರಾದ ದೇವರಾಜ ರಾಠಿ.
ಒಂದು ಎಕರೆಗೆ ಅಂದಾಜು ೨ವರೆ ಲಕ್ಷದಷ್ಟು ಖರ್ಚು ಬರುತ್ತದೆ. ಉತ್ತಮ ಬೆಲೆ ದೊರೆತರೆ ಅರ್ಧ ಎಕರೆಯಲ್ಲಿ ಎಲ್ಲ ಖರ್ಚುತೆಗೆದು ೫ ರಿಂದ ೬ ಲಕ್ಷದವರೆಗೆ ಆಧಾಯ ಮಾಡಿಕೊಳ್ಳಬಹುದು. ವಿಳ್ಯೆದೆಲೆಯನ್ನು ಬೆಂಗೂರು, ಮುಂಬೈ, ಹೈದ್ರಾಬಾದ, ಬೆಳಗಾವಿ, ಚಿಕ್ಕೋಡಿ, ಸೊಲ್ಲಾಪೂರ ಸೇರಿದಂತೆ ಕರ್ನಾಟಕ ಮಹಾರಾಷ್ಟçದ ವಿವಿಧ ಬಾಗ ಹಾಗೂ ಸ್ಥಳೀಯ ಮಾರುಕಟ್ಟೆಗೂ ವಿಳ್ಯೆದೆಲೆಯನ್ನು ಕಳುಹಿಸುತ್ತೇವೆ. ಎಲೆ ಬಳ್ಳಿಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಉತ್ತಮ ಬೆಳೆ ಬೆಳೆಯಬಹುದು ಎನ್ನುತ್ತಾರೆ ರೈತರಾದ ದೇವರಾಜ ರಾಠಿ.

ವಿಳ್ಯೆದೆಲೆ ಪ್ರಾಚೀನ ಕಾಲದಿಂದಲೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಎಲ್ಲ ಪೂಜೆ ಸಮಾರಂಭಗಳಿಗೂ ಅಗತ್ಯದ ವಸ್ತುವಾಗಿದ್ದು, ಜೊತೆಗೆ ತಾಂಬೂಲವಾಗಿ ಬಳಸಲ್ಪಡುವ ವಿಳ್ಯೆದೆಲೆ ಹಲವಾರು ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಕ್ಯಾಲ್ಸಿಯಂ ಕೂಡಾ ಹೆಚ್ಚಾಗಿ ಸಿಗುತ್ತದೆ.
ಉತ್ತಮ ನಿರ್ವಹಣೆ, ಆಧುನಿಕತೆಯನ್ನು ಬಳಸಿಕೊಂಡು ಬೆಳೆ ಬೆಳೆದರೆ ಲಾಭ ಕಟ್ಟಿಟ ಬುತ್ತಿ ಎಂಬುದನ್ನು ದೇವರಾಜ ರಾಠಿ ತೋರಿಸಿಕೊಟ್ಟಿದ್ದಾರೆ.