ಸುದ್ದಿಕನ್ನಡ ವಾರ್ತೆ
ಬೆಂಗಳೂರು: ಬಂಗಾಳಕೊಲ್ಲಿ ಭಾಗದ ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪ್ರಸರಣವು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಆಂಧ್ರ ಕರಾವಳಿ ಭಾಗದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಸಹ ಬಲಗೊಂಡಿದ್ದು, ಈ ಹವಾಮಾನ ವೈರಪರೀತ್ಯಗಳ ಕಾರಣದಿಂದಾಗಿ ಕರ್ನಾಟಕದಾದ್ಯಂತ ಅತ್ಯಧಿಕ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವಿಜ್ಞಾನಿಗಳು ಗುರುವಾರ ಮುನ್ಸೂಚನೆಯಲ್ಲಿ ತಿಳಿಸಿದ್ದಾರೆ.
ಹವಾಮಾನ ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ರಾಜ್ಯದ 9 ಜಿಲ್ಲೆಗಳಿಗೆ ಮುಂದಿನ 05 ದಿನ ಗುಡುಗು ಮಿಂಚು ಸಹಿತ ಅತ್ಯಧಿಕ ಮಳೆ ಅಂದರೆ 200 ಮಿಲಿ ಮೀಟರ್ಗೂ ಹೆಚ್ಚು ಮಳೆ ಆಗಲಿದ್ದು, ‘ರೆಡ್ ಅಲರ್ಟ್’ ನೀಡಲಾಗಿದೆ.
ಇದರಲ್ಲಿ 05 ದಿನವೂ ಕರಾವಳಿ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಇದ್ದರೆ, ಉಳಿದಂತೆ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ 04 ದಿನ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಜೂನ್ 13 ರಂದು ‘ರೆಡ್ ಅಲರ್ಟ್’ ಘೋಷಿಸಲಾಗಿದೆ.
ಕಾರವಾರದಲ್ಲಿ 374.2 ಮಿ.ಮೀ ಮಳೆ ದಾಖಲು…
ಕಳೆದ 24 ಗಂಟೆಗಳಲ್ಲಿ ಕಾರವಾರದಲ್ಲಿ 374.2 ಮಿ.ಮೀ, ಕೋಟಾ 190.8 ಮಿ.ಮೀ, ಕೆರೂರು 160.2 ಮಿ.ಮೀ, ಹುಬ್ಬಳ್ಳಿ 149 ಮಿ.ಮೀ, ಗೋಕರ್ಣ 148.4 ಮಿ.ಮೀ, ಅಂಕೋಲಾ 147.8 ಮಿ.ಮೀ, ಹೊನ್ನಾವರ 127 ಮಿ.ಮೀ, ಗಬ್ಬೂರ್ 115.2 ಮಿ.ಮೀ, ಕುಂದಾಪುರ 114.2 ಮಿ.ಮೀ, ಮಂಗಳೂರು ಎಪಿ – 112.9 ಮಿ.ಮೀ, ಕುಮಟಾ- 105.8 ಮಿ.ಮೀ, ಆಗುಂಬೆ 100 ಮಿ.ಮೀ, ಬಂಟ್ವಾಳ 89 ಮಿ.ಮೀ, ಮೂಡುಬಿದಿರೆ 88.2 ಮಿ.ಮೀ, ಮೂಲ್ಕಿ 86 ಮಿ.ಮೀ, ಲಕ್ಷ್ಮೇಶ್ವರ 83 ಮಿ.ಮೀ ಹಾಗೂ ಉಡುಪಿಯಲ್ಲಿ 82.1ಮಿ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.